*ರಾಜ್ಯೋತ್ಸವದ ಸಂದರ್ಭದಲ್ಲೇ ಪ್ರತ್ಯೇಕ ರಾಜ್ಯದ ಕೂಗು*: *20ಕ್ಕೂ ಅಧಿಕ ಹೋರಾಟಗಾರರು ಪೊಲೀಸ್ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯಾದ್ಯಂತ ಎಲ್ಲೆಡೆ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಕನ್ನಡ ರಾಜ್ಯೋತ್ಸವದ ಸಡಗರ-ಸಂಭ್ರಮ ಕಳೆಕಟ್ಟಿದೆ. ಈ ನಡುವೆ ಪ್ರತ್ಯೇಕ ರಾಜ್ಯದ ಕೂಗು ಕೇಳಿಬಂದಿದೆ.
ಹೌದು. ನಾಡಿನಲ್ಲೆಡೆ ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ವಾತಾವರಣ ಮನೆ ಮಾಡಿದ್ದರೆ ಅತ್ತ ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕೇಳಿಬಂದಿದೆ.
ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಇಂದು ಕಲಬುರಗಿಯ ಎಸ್ ವಿಪಿ ವೃತ್ತದಲ್ಲಿ ಧ್ವಜಾರೋಹಣಕ್ಕೆ ಮುಂದಾಗಿರುವ ಘಟನೆ ನಡೆದಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮತ್ತು 371(ಜೆ) ಕಲಂ ಸಮರ್ಪಕ ಜಾರಿಗೆ ಒತ್ತಾಯಿಸಿ ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ಧ್ವಜಾರೋಹಣಕ್ಕೆ ತೆರಳುತ್ತಿದ್ದರು.
ಈ ವೇಳೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಮ್ ಎಸ್ ಪಾಟೀಲ್ ಸೇರಿದಂತೆ 20 ಕ್ಕೂ ಅಧಿಕ ಹೋರಾಟಗಾರರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.



