Kannada NewsKarnataka NewsLatest

*ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಬರೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಜೇಬಿಗೆ ಭಾರಿ ಹೊರೆ ಬಿದ್ದಿದೆ. ಕಳೆದ ಎರಡು-ಮೂರು ತಿಂಗಳ ಅವಧಿಯಲ್ಲಿ ಅಕ್ಕಿ ದರ ಶೇ.25ರಿಂದ 30ರಷ್ಟು ಹೆಚ್ಚಳವಾಗಿದ್ದು, ಕೆಲವು ತಳಿಯ ಅಕ್ಕಿಗಳ ಬೆಲೆ ಪ್ರತಿ ಕೆಜಿಗೆ ₹100ರ ಗಡಿ ದಾಟಿದೆ.

ಮುಂಗಾರು ಮಳೆಯ ಕೊರತೆಯಿಂದಾಗಿ ಭತ್ತದ ನಾಟಿ ಪ್ರಮಾಣ ಕುಸಿದಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬಾರದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ರಾಜ್ಯದ ಪ್ರಮುಖ ಭತ್ತ ಬೆಳೆಯುವ ಜಿಲ್ಲೆಗಳಾದ ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರಿನಲ್ಲಿ ಭತ್ತದ ನಾಟಿ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.

ಇದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಅಕ್ಕಿಯ ಪೂರೈಕೆ ಕುಂಠಿತಗೊಂಡಿದ್ದು, ಸೋನಾ ಮಸೂರಿ, ಸ್ಟೀಮ್ ರೈಸ್, ಕೊಲಂ, ಬಾಸ್ಮತಿ, ಜೀರಾ ರೈಸ್ ಹಾಗೂ ರಾಜಮುಡಿ ಸೇರಿದಂತೆ ವಿವಿಧ ತಳಿಗಳ ದರ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿಯೂ ಬೆಲೆ ಮತ್ತಷ್ಟು ಹೆಚ್ಚಾಗುವ ಆತಂಕ ಗ್ರಾಹಕರಲ್ಲಿ ಮನೆಮಾಡಿದೆ.

ಅಕ್ಕಿ ಬೆಲೆ ಏರಿಕೆಯ ಬಿಸಿ ಕೇವಲ ಮನೆಗಳ ಅಡುಗೆಮನೆಗೆ ಮಾತ್ರ ಸೀಮಿತವಾಗಿಲ್ಲ. ಹೋಟೆಲ್ ಉದ್ಯಮಕ್ಕೂ ತೀವ್ರ ಹೊಡೆತ ಬಿದ್ದಿದ್ದು, ಆಹಾರ ಪದಾರ್ಥಗಳ ಬೆಲೆ ಹೆಚ್ಚಿಸುವ ಅನಿವಾರ್ಯತೆ ಎದುರಾಗುವ ಸಾಧ್ಯತೆಯಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಅಕ್ಕಿ ಬೆಲೆಯೇರಿಕೆ ಮತ್ತೊಂದು ಆರ್ಥಿಕ ಹೊರೆ ತಂದಿದೆ.

Related Articles

Back to top button