
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಅಕ್ಕಿ, ಬೇಳೆಕಾಳುಗಳು, ಹಾಲು, ಮೊಸರಿನ ದರ ಏರಿಕೆ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಜನತೆಗೆ ಮತ್ತೊಂದು ಬೆಲೆ ಏರಿಕೆ ಬರೆ ನೀಡಿದೆ. ಸಾರಿಗೆ ಬಸ್ ಟಿಕೆಟ್ ದರ ಭಾರಿ ಏರಿಕೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯದ ನಾಲ್ಕು ಸಾರಿಗೆ ಬಸ್ ಗಳ ಟಿಕೆಟ್ ದರ ಏರಿಕೆಯಾಗಿದ್ದು, ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಥಿಯಲ್ಲಿಯಲ್ಲಿ ಮಾತನಾಡಿದ ಸಚಿವರು, ನಾಲ್ಕು ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿಯಲ್ಲಿರುವುದರಿಂದ ಸಾಕಷ್ಟು ಹೊರೆಯಾಗುತ್ತಿದೆ. ಅಲ್ಲದೇ ಸಾರಿಗೆ ನೌಕರರ ಹಾಗೂ ಸುಬ್ಬಂದಿಗಳ ವೇತನ ಪರಿಷ್ಕೃರಣೆ ಮಾಡಬೇಕಿದೆ. ಹಾಗಾಗಿ ಟಿಕೆಟ್ ದರ ಏರಿಕೆ ಅನಿವಾರ್ಯ ಎಂದರು. ಡೀಸೆಲ್ ದರ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಾದಾಗ ಮಾತ್ರ ಟಿಕೆಟ್ ದರ ಏರಿಸಲು ನಿಗಮಗಳಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.
ಕಳೆದ 10 ವರ್ಷಗಳ ಸುದೀರ್ಘ ಅವಧಿಯಲ್ಲಿ ರಾಜ್ಯದಲ್ಲಿ ಕೇವಲ ಒಂದು ಬಾರಿಯಷ್ಟೇ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ ಹಾಗೂ 2025ರಲ್ಲಿಯೂ ಪ್ರಯಾಣ ದರ ಏರಿಕೆ ಮಾಡಲಾಗಿತ್ತು ಎಂದು ಪ್ರಸ್ತಾಪಿಸಿದ್ದಾರೆ.
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಒಟ್ಟು 26,125 ಬಸ್ಗಳು ರಸ್ತೆಗೆ ಇಳಿಯುತ್ತಿದ್ದು, ಇದು ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಸಂಖ್ಯೆಯಾಗಿದೆ. ಸಾರಿಗೆ ಸಂಸ್ಥೆಗಳಲ್ಲಿ ಬರೋಬ್ಬರಿ 1,03,646 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿದಿನ 24,179 ಮಾರ್ಗಗಳಲ್ಲಿ ಬಸ್ಗಳು ಸಂಚರಿಸುತ್ತಿದ್ದು, ದಿನಂಪ್ರತಿ ಬರೋಬ್ಬರಿ 1.24 ಕೋಟಿ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಲಾಗುತ್ತಿದೆ.
ದರ ಏರಿಕೆಯ ವಿಧಾನವನ್ನು ವಿವರಿಸಿದ ಸಚಿವರು, “ನಾವು ಯಾವುದೇ ಒಟ್ಟಾರೆ ಶೇಕಡಾವಾರು ಆಧಾರದಲ್ಲಿ ದರ ಹೆಚ್ಚಳ ಮಾಡಿಲ್ಲ. ಬಸ್ ಸಂಚರಿಸುವ ಕಿಲೋಮೀಟರ್ ಹಾಗೂ ನಿಗದಿತ ಹಂತಗಳ (Stage) ಲೆಕ್ಕಾಚಾರದಲ್ಲಿ ಮಾತ್ರ ದರ ಪರಿಷ್ಕರಣೆ ಮಾಡಿದ್ದೇವೆ. ಇದರಿಂದಾಗಿ ಕಡಿಮೆ ದೂರ ಪ್ರಯಾಣಿಸುವವರಿಗೆ ಕನಿಷ್ಠ ಹಾಗೂ ದೂರದ ಉಪನಗರಗಳಿಗೆ ಸಂಚರಿಸುವವರಿಗೆ ಗರಿಷ್ಠ ₹9 ರವರೆಗೆ ದರ ಏರಿಕೆಯಾಗಿದೆ,” ಎಂದು ತಿಳಿಸಿದರು. ಈ ನೂತನ ಪರಿಷ್ಕೃತ ಬಸ್ ಪ್ರಯಾಣ ದರಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ.
ಕೆ ಎಸ್ ಆರ್ ಟಿಸಿ ಬಸ್ ಪ್ರಯಾಣ ದರ ಗರಿಷ್ಠ 9 ರೂಪಾಯಿಯಂತೆ ಏರಿಕೆ ಮಾಡಲಾಗಿದೆ. ಸ್ಟೇಜ್ ವಾರು ದರ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇಕಡಾವಾರು ಲೆಕ್ಕದಲ್ಲಿ ಹೆಚ್ಚಿಸಲಾಗಿದೆ. ಸ್ಟೇಜ್ಗಳ ಆಧಾರದ ಮೇಲೆ ಮಾತ್ರ ಏರಿಕೆ ಮಾಡಲಾಗಿದೆ. ಮೆಜೆಸ್ಟಿಕ್ನಿಂದ ನೆಲಮಂಗಲ ಹಾಗೂ ಹೊಸಕೋಟೆಗೆ ಇದ್ದ 35 ರೂ. ದರ ಈಗ ₹44ಕ್ಕೆ ಏರಿಕೆಯಾಗಿದ್ದು, ಪ್ರತಿ ಸ್ಟೇಜ್ಗೆ ಇದ್ದ 6 ರೂ. ದರ 10 ರೂ.ಗೆ ಹೆಚ್ಚಿಸಲಾಗಿದೆ.
ಬೆಂಗಳೂರಿನಿಂದ ನೆಲಮಂಗಲ, ಹೊಸಕೋಟೆಗೆ 44 ರೂ. ಹಾಗೂ ಮೈಸೂರಿಗೆ 197 ರೂ. ಆಗಿದೆ. ತುಮಕೂರು, ಕೋಲಾರಕ್ಕೆ 100 ರೂ. ಹಾಗೂ ಹಾಸನಕ್ಕೆ 270 ರೂ.ಗೆ ಏರಿಕೆಯಾಗುವ ಮೂಲಕ ಪ್ರಯಾಣಿಕರ ಪಾಕೆಟ್ಗೆ ಬಿಸಿ ತಟ್ಟಿದೆ.
ಬೆಂಗಳೂರು ಉಪನಗರ ಮಾರ್ಗಗಳ ಪರಿಷ್ಕೃತ ಬಸ್ ದರ:
ಸ್ಥಳ – ಹಳೆಯ ದರ – ಹೊಸ ದರ – ವ್ಯತ್ಯಾಸ
ನೆಲಮಂಗಲ ₹35 ₹44 +₹9
ಹೊಸಕೋಟೆ ₹35 ₹44 +₹9
ದೊಡ್ಡಬಳ್ಳಾಪುರ ₹38 ₹47 +₹9
ಆನೇಕಲ್ ₹38 ₹47 +₹9
ಮಾಗಡಿ ₹46 ₹57 +₹11
ಮಾಲೂರು ₹46 ₹57 +₹11
ಪ್ರಮುಖ ನಗರಗಳಿಗೆ ವೇಗದೂತ (Express) ಬಸ್ಗಳ ಪರಿಷ್ಕೃತ ದರ
ಸ್ಥಳ – ಹಳೆಯ ದರ – ಹೊಸ ದರ – ವ್ಯತ್ಯಾಸ
ಕೋಲಾರ ₹81 ₹100 +₹19
ತುಮಕೂರು ₹81 ₹100 +₹19
ಮಂಡ್ಯ ₹110 ₹136 +₹26
ಮೈಸೂರು ₹160 ₹197 +₹37
ಹಾಸನ ₹219 ₹270 +₹51
ಚಿಕ್ಕಮಗಳೂರು ₹295 ₹363 +₹68
ರಾಜ್ಯದಲ್ಲಿ ಹಾಲು-ಮೊಸರಿನಿಂದ ಹಿಡಿದು ದಿನಸಿ ಸಾಮಾನುಗಳು, ತರಕಾರಿ, ಕರೆಂಟ್ ಬಿಲ್, ನೀರು, ಮನೆ ಬಾಡಿಗೆ ಈಗ ಬಸ್ ಟಿಕೆಟ್ ದರ ಸೇರಿದಂತೆ ಪ್ರತಿಯೊಂದರ ದರವೂ ಒಂದರ ಹಿಂದೊಂದರಂತೆ ಏರಿಕೆಯಾಗುತ್ತಿದ್ದು, ಜನ ಸಾಮಾನ್ಯರು ಜೀವನ ನಿರ್ವಹಣೆ ಮಾಡುವುದದರೂ ಹೇಗೆ? ಎಂಬ ಆತಂಕಕ್ಕೊಳಗಾಗಿದ್ದಾರೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬೆಲೆ ಏರಿಕೆಯಿಂದಾಗಿ ಮನೆ ನಿಭಾಯಿಸುವೂ ಕಷ್ಟಕರವಾಗುತ್ತಿರುವುದು ಸುಳ್ಳಲ್ಲ.




