
ಪ್ರಗತಿವಾಹಿನಿ ಸುದ್ದಿ: ಚಲಿಸುತ್ತಿದ್ದ ರೈಲಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ರೈಲಿನ ಬೋಗಿಗಳು ಧಗ ಧಗನೆ ಹೊತ್ತಿ ಉರಿದಿರುವ ಘಟನೆ ನಡೆದಿದೆ.
ಕರ್ಮಭೂಮಿ ಎಕ್ಸ್ಪ್ರೆಸ್ (12508) ರೈಲಿನ ಮೂರು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಶರವೇಗದಲ್ಲಿ ಇತರ ಬೋಗಿಗಳಿಗೂ ವ್ಯಾಪಿಸಿದ್ದು, ಧಗ ಧಗನೆ ಹೊತ್ತಿ ಉರಿದಿದೆ.
ಪಂಜಾಬ್ನ ಪಟಿಯಾಲ ಜಿಲ್ಲೆಯ ರಾಜ್ಪುರ ಬಳಿ, ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ರೈಲ್ವೆ ಅಧಿಕಾರಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ಕಾರಿ ರೈಲ್ವೆ ಪೊಲೀಸ್ (GRP) ಠಾಣಾಧಿಕಾರಿ ಗುರ್ಪ್ರೀತ್ ಸಿಂಗ್ ಅವರ ಪ್ರಕಾರ, ಬೋಗಿಯೊಂದರ ಫ್ಯಾನ್ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಈ ಘಟನೆಗೆ ಕಾರಣವಾಗಿದೆ. ಬೆಂಕಿ ಮೊದಲು ಒಂದು ಬೋಗಿಯೊಳಗೆ ಕಾಣಿಸಿಕೊಂಡು, ನಂತರ ಇತರ ಬೋಗಿಗಳಿಗೆ ಹರಡಿದೆ ಎಂದು ತಿಳಿದುಬಂದಿದೆ.
ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಶಂಕೆ ವ್ಯಕ್ತವಾಗಿದೆ. ಘಟನೆಯ ನಂತರ, ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರು ಆತಂಕಕ್ಕೊಳಗಾದರು. ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಕ್ರಮ ಕೈಗೊಂಡರು.
ಪ್ರಯಾಣಿಕರು ತಮ್ಮ ಮುಂದಿನ ಪ್ರಯಾಣವನ್ನು ಮುಂದುವರಿಸಲು ಮತ್ತೊಂದು ರೈಲಿನ ವ್ಯವಸ್ಥೆ ಮಾಡಲಾಗುತ್ತಿದೆ. ಬೋಗಿಗಳಿಗೆ ಆಗಿರುವ ಹಾನಿಯ ಪ್ರಮಾಣ ಮತ್ತು ಪ್ರಯಾಣಿಕರಿಗಾಗಿ ಮಾಡಲಾದ ವ್ಯವಸ್ಥೆಗಳ ಕುರಿತ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.




