
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಉತ್ತರ ಕರ್ನಾಟಕದ ಪ್ರಮುಖ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಲಿರುವ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 2ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು, ಒಟ್ಟು 9 ದಿನಗಳ ಕಾಲ ಕಲಾಪ ನಡೆಯಲಿದೆ.
ಈ ಕುರಿತು ಕರ್ನಾಟಕ ಸರ್ಕಾರದ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು ನವೆಂಬರ್ 6ರಂದು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಭಾರತ ಸಂವಿಧಾನದ ಅನುಚ್ಛೇದ 174(1)ರ ಅಡಿಯಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ತಮ್ಮ ಅಧಿಕಾರ ಚಲಾಯಿಸಿ ಅಧಿವೇಶನ ಕರೆಯುವ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 2ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ವಿಧಾನಸಭೆಯ ಕಲಾಪ ಆರಂಭವಾಗಲಿದೆ. ಸರ್ಕಾರದ ಕಾರ್ಯದರ್ಶಿ ಜಿ. ಶ್ರೀಧರ್ ಅವರು ಆದೇಶಕ್ಕೆ ಸಹಿ ಹಾಕಿದ್ದಾರೆ.
9 ದಿನಗಳ ತಾತ್ಕಾಲಿಕ ಕಲಾಪ ವೇಳಾಪಟ್ಟಿ
ಅಧಿವೇಶನದ ತಾತ್ಕಾಲಿಕ ಕಾರ್ಯಕಲಾಪಗಳ ವೇಳಾಪಟ್ಟಿಯೂ ಪ್ರಕಟಗೊಂಡಿದೆ.
ಡಿ. 2, ಬುಧವಾರ: ಸರ್ಕಾರಿ ಕಾರ್ಯಕಲಾಪಗಳು
ಡಿ. 3, ಗುರುವಾರ: ಖಾಸಗಿ ಹಾಗೂ ಸರ್ಕಾರಿ ಕಾರ್ಯಕಲಾಪಗಳು
ಡಿ. 4, ಶುಕ್ರವಾರ: ಸರ್ಕಾರಿ ಕಾರ್ಯಕಲಾಪಗಳು
ಡಿ. 5, ಶನಿವಾರ: ಸರ್ಕಾರಿ ಕಾರ್ಯಕಲಾಪಗಳು
ಡಿ. 6, ಭಾನುವಾರ: ಸಾರ್ವತ್ರಿಕ ರಜೆ
ಡಿ. 7, ಸೋಮವಾರ: ಸರ್ಕಾರಿ ಕಾರ್ಯಕಲಾಪಗಳು
ಡಿ. 8, ಮಂಗಳವಾರ: ಸರ್ಕಾರಿ ಕಾರ್ಯಕಲಾಪಗಳು
ಡಿ. 9, ಬುಧವಾರ: ಸರ್ಕಾರಿ ಕಾರ್ಯಕಲಾಪಗಳು
ಡಿ. 10, ಗುರುವಾರ: ಖಾಸಗಿ ಹಾಗೂ ಸರ್ಕಾರಿ ಕಾರ್ಯಕಲಾಪಗಳು
ಡಿ. 11, ಶುಕ್ರವಾರ: ಸರ್ಕಾರಿ ಕಾರ್ಯಕಲಾಪಗಳೊಂದಿಗೆ ಅಧಿವೇಶನ ಮುಕ್ತಾಯ.
ರಾಜ್ಯಪಾಲರ ಅಧಿಕೃತ ಆದೇಶ ಹೊರಬಿದ್ದ ಬೆನ್ನಲ್ಲೇ ಬೆಳಗಾವಿ ಜಿಲ್ಲಾಡಳಿತ ಅಧಿವೇಶನದ ಸಿದ್ಧತೆಗಳನ್ನು ಚುರುಕುಗೊಳಿಸುವ ನಿರೀಕ್ಷೆಯಿದೆ. ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದ ಸುತ್ತಮುತ್ತ ಮೂಲಸೌಕರ್ಯ, ಭದ್ರತೆ, ವಸತಿ ಹಾಗೂ ಇತರ ವ್ಯವಸ್ಥೆಗಳ ಸಿದ್ಧತೆಗಳು ಮಹತ್ವ ಪಡೆದುಕೊಂಡಿವೆ.




