Kannada NewsKarnataka NewsLatestPolitics

*ಹಾಸನಾಂಬೆ ದರ್ಶನಕ್ಕೆ ಬಂದ ಸಿದ್ದರಾಮಯ್ಯಗೆ ಗೇಟ್ ಗೊಂದಲ*: *ಅಧಿಕಾರಿಗಳ ವಿರುದ್ಧ ಶಿವಲಿಂಗೇಗೌಡ ಗರಂ*

ಪ್ರಗತಿವಾಹಿನಿ ಸುದ್ದಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನದ ಶಕ್ತಿ ದೇವತೆ ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ. 1,000 ರೂಪಾಯಿ ವಿಶೇಷ ದರ್ಶನದ ಟಿಕೆಟ್ ಪಡೆದು ದೇವಿಯ ದರ್ಶನ ಮಾಡಿದರು. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎರಡು ಬಾರಿ ಹಾಸನಾಂಬೆ ದರ್ಶನ ಪಡೆದಿದ್ದ ಸಿದ್ದರಾಮಯ್ಯ, ಈ ಬಾರಿ ತಮ್ಮ ಆಪ್ತರ ಜೊತೆ ದೇವಸ್ಥಾನಕ್ಕೆ ಆಗಮಿಸಿದ್ದರು.

ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಮತ್ತು ಸಂಸದ ಶ್ರೇಯಸ್ ಪಟೇಲ್ ಸಾಥ್ ನೀಡಿದರು. ಆದರೆ ದೇವಸ್ಥಾನಕ್ಕೆ ಆಗಮಿಸುವ ಮಾರ್ಗದಲ್ಲಿ ಭದ್ರತಾ ವ್ಯವಸ್ಥೆಯ ಗೊಂದಲದಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಡಿಸಿ, ಎಸ್‌ಪಿ ಹಾಗೂ ಮತ್ತೊಂದು ಇನ್ನೋವಾ ಕಾರು ಬರುತ್ತಿದ್ದಂತೆ ಗೇಟ್ ಬಂದ್ ಮಾಡಲಾಗಿತ್ತು. ಈ ವೇಳೆ ಸಿದ್ದರಾಮಯ್ಯ ಅವರ ಎಸ್ಕಾರ್ಟ್ ಮತ್ತು ಪೈಲಟ್ ವಾಹನಗಳು ಮುಂದೆ ಸಾಗಿದವು. ಇದರಿಂದ ಸಿದ್ದರಾಮಯ್ಯ ಅವರ ಕಾರು ಬೇರೆ ದಾರಿಯಲ್ಲಿ ಸಾಗಬೇಕಾಯಿತು. ನೂರಾರು ವಾಹನಗಳ ನಡುವೆ ಟ್ರಾಫಿಕ್‌ನಲ್ಲಿ ಸಿಲುಕುವಂತಾಯಿತು.

ಇತ್ತ ಸಿದ್ದರಾಮಯ್ಯ ಅವರ ಕಾರು ಎಲ್ಲಿದೆ ಎಂಬ ಗೊಂದಲ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಲ್ಲೂ ಉಂಟಾಯಿತು. ಕೊನೆಗೆ ಸಂತೇಪೇಟೆ ಸರ್ಕಲ್ ಮೂಲಕ ಸಿದ್ದರಾಮಯ್ಯ ಅವರ ಕಾರು ದೇವಸ್ಥಾನದ ಬಳಿ ತಲುಪಿತು. ಈ ವೇಳೆ ಸಚಿವ ಶಿವಲಿಂಗೇಗೌಡರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಯಾಕೆ ಹೀಗೆ ಗೊಂದಲ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಹಾಸನಾಂಬೆ ದೇವಿಯ ದರ್ಶನ ಪಡೆದ ಬಳಿಕ ಸಿದ್ದರಾಮಯ್ಯ ಅವರು ಹಾಸನ ಮಹಾನಗರಪಾಲಿಕೆಯ ವಸ್ತುಪ್ರದರ್ಶನ ಮೈದಾನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು. ನಂತರ ನಾಡ ಕುಸ್ತಿ ಫೈನಲ್ ಪಂದ್ಯಕ್ಕೆ ಚಾಲನೆ ನೀಡಿ, ಪಂದ್ಯವನ್ನು ವೀಕ್ಷಿಸಿದರು.

Related Articles

Back to top button