Kannada NewsKarnataka NewsLatest

*7 ಕೋಟಿ ರೂ. ಯೋಜನೆಗೆ ಹೆಸರಿನ ವಿವಾದ*: *ಶಿವಕುಮಾರ ಸ್ವಾಮೀಜಿ ಸರ್ಕಲ್‌ನಲ್ಲಿ ಏನಿದು ಗೊಂದಲ?*

ಪ್ರಗತಿವಾಹಿನಿ ಸುದ್ದಿ: ತುಮಕೂರು ನಗರದ ಹೃದಯಭಾಗದಲ್ಲಿರುವ ಶಿವಕುಮಾರ ಸ್ವಾಮೀಜಿ ಸರ್ಕಲ್ ಈಗ ಹೊಸ ವಿವಾದದ ಕೇಂದ್ರವಾಗಿದೆ. ಸುಮಾರು 7 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಎಲ್‌ಇಡಿ ಪರದೆಗಳ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆದರೆ ಈ ಯೋಜನೆಗೆ ಅಧಿಕಾರಿಗಳು ಇಟ್ಟಿರುವ ‘ತುಮಕೂರು ಸ್ಕ್ವೇರ್’ ಎಂಬ ಹೆಸರು ಭಕ್ತರು ಮತ್ತು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.

ಶಿವಕುಮಾರ ಸ್ವಾಮೀಜಿಗಳ ಹೆಸರಿನ ಸರ್ಕಲ್‌ನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಯೋಜನೆಗೆ ‘ತುಮಕೂರು ಸ್ಕ್ವೇರ್’ ಎಂದು ಹೆಸರಿಟ್ಟಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಮುಂದೆ ಇದೇ ಹೆಸರು ಜನಪ್ರಿಯವಾಗಿ ಮೂಲ ಸರ್ಕಲ್‌ನ ಹೆಸರೇ ಮರೆಯಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಹೀಗಾಗಿ ಹೊಸ ಸ್ಕ್ವೇರ್‌ಗೂ ಶಿವಕುಮಾರ ಸ್ವಾಮೀಜಿಗಳ ಹೆಸರನ್ನೇ ಇಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಈ ವಿಚಾರ ಇದೀಗ ರಾಜಕೀಯ ನಾಯಕರ ಪತ್ರ ವ್ಯವಹಾರಕ್ಕೂ ಕಾರಣವಾಗಿದೆ. ಕೇಂದ್ರ ಸಚಿವ ವಿ. ಸೋಮಣ್ಣ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಮಾಜಿ ಸಚಿವ ಸೊಗಡು ಶಿವಣ್ಣ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ಗೂ ಮನವಿ ಸಲ್ಲಿಸಿದ್ದಾರೆ. ಸ್ಥಳೀಯ ಶಾಸಕ ಜಿ.ಬಿ. ಜ್ಯೋತಿಗಣೇಶ್ ಕೂಡ ಈ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಶಿವಕುಮಾರ ಸ್ವಾಮೀಜಿ ಸರ್ಕಲ್‌ನ ಹೆಸರನ್ನು ಬದಲಿಸುವ ಯಾವುದೇ ಉದ್ದೇಶ ಇಲ್ಲ ಎಂದು ತುಮಕೂರು ಮಹಾನಗರ ಪಾಲಿಕೆ ಈಗಾಗಲೇ ಸ್ಪಷ್ಟಪಡಿಸಿದೆ. ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಕೂಡ ಇದೇ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ಇದೀಗ ಜಿಲ್ಲಾಧಿಕಾರಿಗಳು ಅಧಿಕೃತ ಪತ್ರದ ಮೂಲಕ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

ಆದರೆ ಸರ್ಕಲ್‌ನ ಹೆಸರಿನ ಬಗ್ಗೆ ಸ್ಪಷ್ಟನೆ ಬಂದಿದ್ದರೂ, ಹೊಸದಾಗಿ ನಿರ್ಮಾಣವಾಗುತ್ತಿರುವ ಎಲ್‌ಇಡಿ ಸ್ಕ್ವೇರ್‌ಗೆ ಯಾವ ಹೆಸರು ಇಡಬೇಕು ಎಂಬ ಪ್ರಶ್ನೆ ಮಾತ್ರ ಇನ್ನೂ ಬಗೆಹರಿದಿಲ್ಲ. ಸ್ಕ್ವೇರ್‌ಗೂ ಶಿವಕುಮಾರ ಸ್ವಾಮೀಜಿಗಳ ಹೆಸರನ್ನೇ ಇಡಬೇಕು ಎಂಬ ಸಾರ್ವಜನಿಕರ ಬೇಡಿಕೆಗೆ ಜಿಲ್ಲಾಡಳಿತ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಮುಂದುವರಿದಿದೆ.

ಒಟ್ಟಿನಲ್ಲಿ, ಸರ್ಕಲ್‌ನ ಹೆಸರು ಬದಲಾಗುವುದಿಲ್ಲ ಎಂಬ ಸ್ಪಷ್ಟನೆ ಸಿಕ್ಕಿದೆ. ಆದರೆ 7 ಕೋಟಿ ರೂಪಾಯಿ ವೆಚ್ಚದ ಹೊಸ ಯೋಜನೆಗೆ ‘ತುಮಕೂರು ಸ್ಕ್ವೇರ್’ ಎಂಬ ಹೆಸರೇ ಮುಂದುವರಿಯುತ್ತದೆಯೇ ಅಥವಾ ಶಿವಕುಮಾರ ಸ್ವಾಮೀಜಿಗಳ ಹೆಸರಿಡಲಾಗುತ್ತದೆಯೇ ಎಂಬುದು ಇನ್ನೂ ನಿರ್ಧಾರವಾಗಬೇಕಿದೆ.

Related Articles

Back to top button