Latest

ಗೋಲ್ಡನ್ ವಾಯ್ಸ್ ಆಫ್ ಬೆಳಗಾವಿ ಪ್ರಶಸ್ತಿ ಬಾಚಿಕೊಂಡ ಕೆಎಲ್‌ಇ ವಿದ್ಯಾರ್ಥಿಗಳು!

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಗೋಲ್ಡನ್ ವಾಯ್ಸ್ ಆಫ್ ಬೆಳಗಾವಿ ಸಂಗೀತ ಸ್ಪರ್ಧೆಯಲ್ಲಿ ಕೆಎಲ್ಇ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಮೊದಲ ಸ್ಥಾನ ಪಡೆಯುವ ಮೂಲಕ ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಗರಿ ಏರಿಸಿದ್ದಾರೆ. 
ರಸಿಕರಂಜನ ಸಂಸ್ಥೆ ಹಾಗೂ ಲೋಕಮಾನ್ಯ ಕೋ ಆಪರೇಟಿವ್ ಸೊಸೈಟಿ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಿಂದಿ ಹಳೆಯ ಚಿತ್ರಗೀತೆಗಳ ಕರೋಕೆ ಗೋಲ್ಡನ್ ವಾಯ್ಸ್ ಆಫ್ ಬೆಳಗಾವಿಯ ಸ್ಪರ್ಧೆ ಇದಾಗಿತ್ತು.
ಕಳೆದ ಒಂದು ತಿಂಗಳಿನಿಂದ ವಿವಿಧ ಕಾಲೇಜಿನ 11 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಭಾನುವಾರ ಆಯ್ಕೆಯಾದ ತಂಡದ ಗ್ರಾಂಡ್ ಫಿನಾಲೆ ಆಯೋಜಿಸಲಾಗಿತ್ತು. ಮೊದಲ ಸುತ್ತಿನಿಂದಲೇ ಗೆಲುವಿನ ನಗೆಯೊಂದಿಗೆ ಮುಂದಕ್ಕೆ ಅಡಿ ಇರಿಸುತ್ತಲೇ ಬಂದ ಕೆಎಲ್‌ಇ ಸಂಗೀತ ವಿದ್ಯಾಲಯದ ತಂಡ ಕೊನೆಯ ಸುತ್ತಿನಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡು ಬೀಗಿದೆ. 
ಅಂತಿಮ ಸುತ್ತಿನಲ್ಲಿ ಕೆಎಲ್‌ಇ ಲಿಂಗರಾಜ ಕಾಲೇಜು ತಂಡ, ಆರ್‌ಪಿಡಿ ತಂಡ, ಗೋಗಟೆ ಕಾಲೇಜು ತಂಡದ ಜತೆಯಲ್ಲಿ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಕೆಎಲ್‌ಇ ಸಂಗೀತ ವಿದ್ಯಾಲಯದ ತಂಡದ ವಿದ್ಯಾರ್ಥಿಗಳಾದ ಶ್ರೀವತ್ಸ ಹುದ್ದಾರ, ಕಾಜಲ ಧಾಮನೇಕರ, ಮತ್ತು ರಾಜಶ್ರೀ ಹೆಬ್ಬಾಳಕರ್ ಅವರು ತಮ್ಮ ಹಾಡಿನ ಮೋಡಿಯಲ್ಲಿ ಸಭಿಕರನ್ನು, ತೀರ್ಪುಗಾರರನ್ನು ಸೆಳೆಯುವಲ್ಲಿ ಯಶಸ್ವಿಯಾದರು.
ನಂತರ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗೆದ್ದ ತಂಡಕ್ಕೆ 25 ಸಾವಿರ ರೂ ನಗದು ಬಹುಮಾನ, ಗೋಲ್ಡನ್ ವಾಯ್ಸ್ ಆಫ್ ಬೆಳಗಾವಿ ಫಲಕ ಹಾಗೂ ಪ್ರಮಾಣ ಪತ್ರಗಳನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅವಿನಾಶ ಪೋತದಾರ ಹಾಗೂ ಕಿರಣ್ ಠಾಕೂರ್ ವಿತರಿಸಿದರು. 
ಕೆಎಲ್‌ಇ ಸಂಗೀತ ವಿಭಾಗದ ಮುಖ್ಯಸ್ಥೆ ಡಾ. ಸ್ನೇಹಾ ರಾಜೂರಿಕರ್, ಪ್ರಾಧ್ಯಾಪಕರಾದ ಸುನೀತಾ ಪಾಟೀಲ, ಡಾ. ದುರ್ಗಾ ಕಾಮತ್ ನಾಡಕರ್ಣಿ ಉಪಸ್ಥಿತರಿದ್ದರು. 
ವಿದ್ಯಾರ್ಥಿಗಳ ಈ ಸಾಧನೆಗೆ ಕೆಎಲ್‌ಇ ಅಕ್ಯಾಡಮಿ ಆಫ್ ಹೈಯರ್ ಎಜುಕೇಷನ್ ರಿಜಿಸ್ಟ್ರಾರ್ ಡಾ. ವಿ.ಡಿ. ಪಾಟೀಲ ಅಭಿನಂದಿಸಿ ಪ್ರಶಂಸಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button