*ಮಗಳ ನೆನಪಿಗಾಗಿ ಇಂದಿಗೂ ಅದೇ ವಾಚ್*: *ಚಪ್ಪಲಿಯನ್ನೂ ತ್ಯಜಿಸಿದ ನಟ ವಿಜಯ್ ಆಂಟನಿ*

ಪ್ರಗತಿವಾಹಿನಿ ಸುದ್ದಿ: ಮಗಳನ್ನು ಕಳೆದುಕೊಂಡ ನೋವು ತಂದೆಯ ಮನಸ್ಸಿನಲ್ಲಿ ಎಷ್ಟು ಆಳವಾಗಿ ಉಳಿಯಬಹುದು ಎಂಬುದಕ್ಕೆ ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟನಿ ಅವರ ಬದುಕೇ ಸಾಕ್ಷಿಯಾಗಿದೆ. 2023ರಲ್ಲಿ ಹಿರಿಯ ಮಗಳು ಮೀರಾ ನಿಧನರಾದ ಬಳಿಕ ಅವರು ಇಂದಿಗೂ ಆ ನೋವಿನಿಂದ ಹೊರಬಂದಿಲ್ಲ. ಮಗಳ ನೆನಪಿಗಾಗಿ ಅವರು ಕೈಗೊಂಡಿರುವ ನಿರ್ಧಾರಗಳು ಹಾಗೂ ಇಂದಿಗೂ ಪಾಲಿಸಿಕೊಂಡು ಬರುತ್ತಿರುವ ಅಭ್ಯಾಸಗಳ ಬಗ್ಗೆ ಪತ್ನಿ ಫಾತಿಮಾ ಭಾವುಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ತಂದೆ-ಮಗಳ ಬಾಂಧವ್ಯದ ಕಥಾಹಂದರ ಹೊಂದಿರುವ ‘ಅಪ್ಪ ಕುಟ್ಟಿ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಫಾತಿಮಾ ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಮಗಳ ಸಾವಿನ ಬಳಿಕ ವಿಜಯ್ ಆಂಟನಿ ಸಿನಿಮಾ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಸುಮಾರು ಐದು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದಾಗಿ ಫಾತಿಮಾ ತಿಳಿಸಿದ್ದಾರೆ.
ಮೀರಾಳಿಗಾಗಿ ಮನೆಯಲ್ಲಿ ಒಂದು ಕೋಣೆಯ ತುಂಬಾ ಚಪ್ಪಲಿ ಮತ್ತು ಶೂಗಳನ್ನು ತಂದಿಡಲಾಗಿತ್ತು. ಅವುಗಳನ್ನು ನೋಡಿದ ಬಳಿಕ ವಿಜಯ್ ಆಂಟನಿ ಚಪ್ಪಲಿ ಧರಿಸುವುದನ್ನೇ ನಿಲ್ಲಿಸುವ ನಿರ್ಧಾರ ಮಾಡಿದರು. ಈಗ ಕೆಲವು ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಮಾತ್ರ ಶೂ ಧರಿಸುತ್ತಾರೆ ಎಂದು ಫಾತಿಮಾ ಹೇಳಿದ್ದಾರೆ.
ವಿಜಯ್ ಬಳಿ ಹಲವು ದುಬಾರಿ ಕೈಗಡಿಯಾರಗಳಿದ್ದರೂ ಅವುಗಳನ್ನು ಬಳಸುತ್ತಿಲ್ಲ. ಮಗಳನ್ನು ಕೊನೆಯದಾಗಿ ನೋಡಿದಾಗ ಆಕೆಯ ಕೈಯಲ್ಲಿದ್ದ ಸಾಮಾನ್ಯ ವಾಚ್ ಅನ್ನೇ ಇಂದಿಗೂ ಪ್ರತಿದಿನ ಕಟ್ಟಿಕೊಳ್ಳುತ್ತಿದ್ದಾರೆ. ಇದು ಮಗಳ ಮೇಲಿನ ಅವರ ಪ್ರೀತಿಯ ಸಂಕೇತ ಎಂದು ಫಾತಿಮಾ ಭಾವುಕರಾಗಿ ವಿವರಿಸಿದ್ದಾರೆ.
ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯದ ನೋವನ್ನೂ ಫಾತಿಮಾ ಹಂಚಿಕೊಂಡಿದ್ದಾರೆ. “ನಾನು ಏಳು ವರ್ಷದವಳಿದ್ದಾಗ ನನ್ನ ತಂದೆ ಕುಟುಂಬವನ್ನು ಬಿಟ್ಟು ಹೋಗಿದ್ದರು. ತಂದೆಯ ಪ್ರೀತಿಯನ್ನು ನನಗೆ ನೀಡಿದ್ದು ವಿಜಯ್ ಆಂಟನಿ” ಎಂದು ಹೇಳುವ ಮೂಲಕ ಪತಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿಜಯ್ ಆಂಟನಿ ಅವರ ಕಿರಿಯ ಮಗಳು ಲಾರಾ ಕೂಡ ಭಾಗವಹಿಸಿದ್ದರು. ವೇದಿಕೆಯಲ್ಲಿ ಮಾತನಾಡಿದ ವಿಜಯ್ ಆಂಟನಿ, ‘ಅಪ್ಪ ಕುಟ್ಟಿ’ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ತಮ್ಮ ತಂದೆಗೆ ಕರೆ ಮಾಡಿ ಮಾತನಾಡಬೇಕು ಅನಿಸುತ್ತದೆ ಎಂದಿದ್ದಾರೆ.
2023ರ ಸೆಪ್ಟೆಂಬರ್ನಲ್ಲಿ ಆಳ್ವಾರ್ಪೇಟೆಯ ನಿವಾಸದಲ್ಲಿ 16 ವರ್ಷದ ಮೀರಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂದಿನಿಂದ ವಿಜಯ್ ಆಂಟನಿ ಅವರ ಫಿಲ್ಮ್ ಕಾರ್ಪೊರೇಷನ್ ನಿರ್ಮಿಸುವ ಚಿತ್ರಗಳಲ್ಲಿ ಫಾತಿಮಾ ಮತ್ತು ಮೀರಾ ಅವರ ಹೆಸರನ್ನೇ ನಿರ್ಮಾಪಕರಾಗಿ ನಮೂದಿಸಲಾಗುತ್ತಿದೆ.
ಮಾರನ್ ನಿರ್ದೇಶನದ ‘ಅಪ್ಪ ಕುಟ್ಟಿ’ ಚಿತ್ರದಲ್ಲಿ ಪ್ರೀತಿ ಅಸ್ರಾನಿ ನಾಯಕಿಯಾಗಿ ನಟಿಸಿದ್ದಾರೆ. ನವೆಂಬರ್ 19ರಂದು ಧನುಷ್ ಅವರ ‘ಓಂ: ಚಾಪ್ಟರ್ 1’ ಹಾಗೂ ‘ಆಕಾಶಂಲೋ ಒಕ ತಾರಾ’ ಚಿತ್ರಗಳ ಜೊತೆಗೆ ಈ ಸಿನಿಮಾ ತೆರೆಗೆ ಬರುತ್ತಿದೆ.




