ಕ್ಷೇತ್ರದ ವಿವಿಧೆಡೆ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ
https://youtu.be/YJp__odEZbI
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನೀರಾವರಿ ನಿಗಮ ಸೇರಿದಂತೆ ವಿವಿಧ ಇಲಾಖೆಗಳು ರಸ್ತೆ, ಚರಂಡಿ, ಶಾಲಾ ಕಂಪೌಂಡ್ ಮೊದಲಾದವುಗಳಿಗೆ ಅನುದಾನ ನೀಡುತ್ತವೆ ಎನ್ನುವುದು ಈವರೆಗೆ ಈ ಭಾಗದ ಜನರ ಕಲ್ಪನೆಗೂ ಇರಲಿಲ್ಲ. ಉತ್ತರ ಕರ್ನಾಟಕದ ಪಾಲಿಗೆ ಇವೆಲ್ಲ ಕನಸಾಗಿತ್ತು. ಆದರೆ ಈಗ ಕೇವಲ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೊಂದೇ ನೀರಾವರಿ ನಿಗಮದಿಂದ 900 ಕೋಟಿ ರೂ. ಅನುದಾನ ತಂದಿದ್ದೇನೆ ಎಂದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
ಕ್ಷೇತ್ರದ ವಿವಿಧೆಡೆ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗಳಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಬಹುಪಾಲು ಅನುದಾನವನ್ನು ದಕ್ಷಿಣ ಕರ್ನಾಟಕದವರೇ ಹೊತ್ತೊಯ್ಯುತ್ತಿದ್ದರು. ಉತ್ತರ ಕರ್ನಾಟಕದ ಪಾಲಿಗೆ ಇವೆಲ್ಲ ಕನಸಾಗಿತ್ತು. ಆದರೆ ಡಿ.ಕೆ.ಶಿವಕುಮಾರ ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ಈ ಭಾಗಕ್ಕೆ ಮೊದಲ ಬಾರಿಗೆ ಸಾಕಷ್ಟು ದೊಡ್ಡ ಪ್ರಮಾಣದ ಅನುದಾನವನ್ನು ನೀರಾವರಿ ಇಲಾಖೆಯಿಂದ ಕೊಡಿಸಿದ್ದಾರೆ ಎಂದು ಅವರು ಸ್ಮರಿಸಿದರು.
ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 750 ಕೋಟಿ ರೂ. ವೆಚ್ಚದಲ್ಲಿ ಕೆರೆಗಳ ನೀರು ತುಂಬುವ ಯೋಜನೆ ನಡೆಯುತ್ತಿದೆ. ಕೆರೆಗಳು ತುಂಬಿದ ನಂತರ ರೈತರಿಗೆ ನಿಜವಾದ ಅಭಿವೃದ್ಧಿಯ ಕಲ್ಪನೆ ಬರುತ್ತದೆ. ಹೊಲಗಳು ಹಸಿರಾಗಿ, ರೈತರ ಬೆವರಿಗೆ ಬೆಲೆ ಬರುತ್ತದೆ. ಅಭಿವೃದ್ಧಿಯ ನಿಜವಾದ ಅರ್ಥ ಏನೆಂದು ನಾನು ಮಾಡಿ ತೋರುಸುತ್ತಿದ್ದೇನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಲ್ಲೇ ನಾನು ಸಾರ್ಥಕತೆ ಕಾಣುತ್ತೇನೆ ಎಂದು ಹೆಬ್ಬಾಳಕರ್ ತಿಳಿಸಿದರು.
ಚುನಾವಣೆಯ ಮರುದಿನದಿಂದ ನಾನು ರಾಜಕೀಯ ಬಿಟ್ಟಿದ್ದೇನೆ. ಮುಂದಿನ ಚುನಾವಣೆಯವರೆಗೂ ರಾಜಕೀಯ ಬಿಟ್ಟು ಕೇವಲ ಅಭಿವೃದ್ಧಿಯ ಮಂತ್ರವೊಂದನ್ನೇ ನಾನು ಜಪಿಸುತ್ತೇನೆ. ರಾಜಕೀಯವನ್ನು ಕೇವಲ ಚುನಾವಣೆಗೆ ಮಾತ್ರ ಮುಡಿಪಾಗಿಟ್ಟರೆ ಜನರ ಕನಸಿನ ಅಭಿವೃದ್ದಿಯನ್ನು ಕಟ್ಟಿಕೊಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ನೀರಾವರಿ ನಿಗಮದ ವತಿಯಿಂದ 3.26 ಕೋಟಿ ರೂ.ಗಳ ವೆಚ್ಚದಲ್ಲಿ ಬಸರಿಕಟ್ಟಿ ಗ್ರಾಮದಿಂದ ಚಂದನ ಹೊಸೂರ್ ಗ್ರಾಮದವರೆಗೆ ಒಟ್ಟು ನಾಲ್ಕು ಕಿಲೊ ಮೀಟರ್ ರಸ್ತೆಯ ಡಾಂಬರೀಕರಣದ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ ನೀಡಿದರು. ಇಲ್ಲಿ ಈ ಹಿಂದೆ ಯಾವಾಗ ರಸ್ತೆ ಅಭಿವೃದ್ಧಿಪಡಿಸಲಾಗಿತ್ತು ಎನ್ನುವುದು ಸಹ ಜನರಿಗೆ ನೆನಪಿಲ್ಲ.
ತಾರಿಹಾಳ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ಸುಮಾರು 1.50 ಕೋಟಿ ರೂ.ಗಳ ವೆಚ್ಚದಲ್ಲಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಕೊಳಿಕೊಪ್ಪದಿಂದ ತಾರಿಹಾಳವರೆಗೆ ಸುಮಾರು 1.7 ಕಿಲೊಮೀಟರ್ ರಸ್ತೆಯ ಡಾಂಬರೀಕರಣದ ಕಾಮಗಾರಿಗೆ ಸಹ ಲಕ್ಷ್ಮಿ ಹೆಬ್ಬಾಳಕರ್ ಚಾಲನೆಯನ್ನು ನೀಡಿದರು.
ತಾರಿಹಾಳ ಗ್ರಾಮದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕದ ನೀರಾವರಿ ನಿಗಮದಿಂದ ಚಂದನಹೊಸೂರ್ ನಿಂದ ಕೊಳ್ಳಬಸವ ದೇವಸ್ಥಾನದವರೆಗೆ 2.7 ಕಿಮೀ ರಸ್ತೆ ಡಾಂಬರಿಕರಣ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಗಳ ಹಿರಿಯರು, ಸಿ ಸಿ ಪಾಟೀಲ, ತಾಲೂಕ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ಮೃಣಾಲ್ ಹೆಬ್ಬಾಳಕರ, ಅಡಿವೇಶ ಇಟಗಿ, ಶ್ರೀಕಾಂತ್, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ