*ಉಚಿತ ಪಠ್ಯಪುಸ್ತಕಗಳಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು*: *ಪರೀಕ್ಷೆ ಹತ್ತಿರವಾದರೂ ಸಿಗದ ಪುಸ್ತಕಗಳು*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ಈ ಶೈಕ್ಷಣಿಕ ವರ್ಷದಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸುವ ಯೋಜನೆ ಘೋಷಿಸಿದೆ. ಆದರೆ ಶೈಕ್ಷಣಿಕ ವರ್ಷ ಮುಗಿಯುವ ಹಂತಕ್ಕೆ ಬಂದರೂ ಹಲವು ವಿದ್ಯಾರ್ಥಿಗಳಿಗೆ ಇನ್ನೂ ಅಗತ್ಯ ಪುಸ್ತಕಗಳು ಕೈಸೇರಿಲ್ಲ. ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ರಾಜ್ಯ ಸರ್ಕಾರದ ಉಚಿತ ಪಠ್ಯಪುಸ್ತಕ ವಿತರಣಾ ಯೋಜನೆ ಜಾರಿಯಲ್ಲಿದ್ದರೂ ಚಿತ್ರದುರ್ಗ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾತ್ರ ಪುಸ್ತಕಗಳಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಪ್ರಥಮ ಪಿಯುಸಿಯ ರಸಾಯನಶಾಸ್ತ್ರ, ಗಣಿತಶಾಸ್ತ್ರ ಹಾಗೂ ದ್ವಿತೀಯ ಪಿಯುಸಿಯ ಗಣಿತಶಾಸ್ತ್ರ, ಜೀವಶಾಸ್ತ್ರ, ಕನ್ನಡ, ಇಂಗ್ಲಿಷ್ ಮತ್ತು ಕಾಮರ್ಸ್ ವಿಭಾಗದ ವ್ಯವಹಾರ ಅಧ್ಯಯನ ಪುಸ್ತಕಗಳು ಇನ್ನೂ ವಿದ್ಯಾರ್ಥಿಗಳ ಕೈ ಸೇರಿಲ್ಲ.
ಒಂದೆಡೆ ಸರ್ಕಾರದಿಂದ ಉಚಿತವಾಗಿ ಸಿಗಬೇಕಾದ ಪುಸ್ತಕಗಳು ಬಂದಿಲ್ಲ. ಮತ್ತೊಂದೆಡೆ ಹಣ ನೀಡಿ ಖರೀದಿಸೋಣ ಎಂದರೂ ಖಾಸಗಿ ಪುಸ್ತಕ ಮಳಿಗೆಗಳಲ್ಲೂ ಪಠ್ಯಪುಸ್ತಕಗಳು ಲಭ್ಯವಿಲ್ಲ. ಹೀಗಾಗಿ ಪರೀಕ್ಷೆಗೆ ಸಿದ್ಧತೆ ನಡೆಸಬೇಕಾದ ವಿದ್ಯಾರ್ಥಿಗಳು ಪುಸ್ತಕಗಳಿಲ್ಲದೆ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದುರ್ಗದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ್, ಮೇ ತಿಂಗಳಲ್ಲೇ ಬೇಡಿಕೆಗೆ ಅನುಗುಣವಾಗಿ ಪುಸ್ತಕಗಳಿಗಾಗಿ ಸೂಚನೆ ನೀಡಲಾಗಿತ್ತು. ಆದರೆ ಕೆಲವು ಪುಸ್ತಕಗಳ ಮುದ್ರಣ ಕಾರ್ಯ ವಿಳಂಬವಾಗಿದೆ. ಈ ಬಗ್ಗೆ ಗಮನಹರಿಸಿ ಶೀಘ್ರದಲ್ಲೇ ಪುಸ್ತಕಗಳನ್ನು ತರಿಸಿ ವಿದ್ಯಾರ್ಥಿಗಳಿಗೆ ವಿತರಿಸಲು ಪ್ರಯತ್ನಿಸಲಾಗುವುದು. ಆದರೆ ಪುಸ್ತಕಗಳು ಯಾವಾಗ ಲಭ್ಯವಾಗಲಿವೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಒಟ್ಟಾರೆ, ಪರೀಕ್ಷೆಗಳು ಹತ್ತಿರವಾಗುತ್ತಿದ್ದರೂ ಪಠ್ಯಪುಸ್ತಕಗಳಿಲ್ಲದೆ ಚಿತ್ರದುರ್ಗ ಜಿಲ್ಲೆಯ ಹಲವು ಪಿಯುಸಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಓದುವುದು ಹೇಗೆ, ಪರೀಕ್ಷೆಗೆ ಸಿದ್ಧತೆ ನಡೆಸುವುದು ಹೇಗೆ ಎಂಬ ಚಿಂತೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಇನ್ನಾದರೂ ಸರ್ಕಾರ ಮತ್ತು ಶಿಕ್ಷಣ ಇಲಾಖೆ ತಕ್ಷಣ ಗಮನಹರಿಸಿ ಪುಸ್ತಕ ವಿತರಣೆಗೆ ಕ್ರಮ ಕೈಗೊಳ್ಳಬೇಕಿದೆ.



