
ಪ್ರಗತಿವಾಹಿನಿ ಸುದ್ದಿ: ಶಿಕ್ಷಕರು ಬೈದರು ಎಂಬ ಕಾರಣಕ್ಕೆ ವಸತಿ ಶಾಲೆಯ ಹಾಸ್ಟೇಲ್ ನಿಂದ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಕೊನೆಗೂ ಪತ್ತೆಯಾಗಿದ್ದಾರೆ.
ನಾಲ್ವರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಏಕಾಏಕಿ ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದರು. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಮೊರಾರ್ಜಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿತ್ತು.
ರಾಮನಗರದ ಕೆಂಪೇಗೌಡ ಸರ್ಕಲ್ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದರು. ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ಬುಧವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಹಾಸ್ಟೆಲ್ನಿಂದ ಪರಾರಿಯಾಗಿದ್ದರು.
ಶಿಕ್ಷಕರು ಬೈದರು ಎಂಬ ಕಾರಣಕ್ಕೆ ಮನನೊಂದು ರಾತ್ರಿ ವೇಳೆ ಶಾಲೆಯ ಕಾಂಪೌಂಡ್ ಹಾರಿ ಹೊರಹೋಗಿದ್ದಾರೆ. ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಸಂಬಂಧ ವಸತಿ ಶಾಲೆಯ ಪ್ರಾಂಶುಪಾಲರು ರಾಮನಗರದ ಐಜೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೀಗ ನಾಲ್ವರು ಮಕ್ಕಳು ಕೊಪ್ಪಳದಲ್ಲಿ ಪತ್ತೆಯಾಗಿದ್ದಾರೆ. ಮಕ್ಕಳು ರೈಲಿನ ಮೂಲಕ ರಾಮನಗದಿಂದ ಕೊಪ್ಪಳಕ್ಕೆ ತೆರಳಿದ್ದರು. ಪೊಲೀಸರು ಕೊಪ್ಪಳದಲ್ಲಿ ಮಕ್ಕಳನ್ನು ಪತ್ತೆ ಮಾಡಿದ್ದಾರೆ.
ನಾಪತ್ತೆಯಾದ ಒಂದೇ ದಿನದಲ್ಲಿ ನಾಲ್ವರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಪತ್ತೆ ಮಾದ್ದಾರೆ. ಸದ್ಯ ಮಕ್ಕಳನ್ನು ರಾಮನಗರಕ್ಕೆ ವಾಪಸ್ ಕರೆತರುತ್ತಿದ್ದಾರೆ.


