*ಬಡವರಿಗೂ 30/40 ಅಳತೆಯ ನಿವೇಶನ*: *ಮೊದಲ ಹಂತದಲ್ಲಿ 5 ಲಕ್ಷ ನಿವೇಶನ ಹಂಚಿಕೆ*

ಪ್ರಗತಿವಾಹಿನಿ ಸುದ್ದಿ: “ರಾಜ್ಯದ ಗ್ರಾಮೀಣ ಪ್ರದೇಶಗಳ ಚಿತ್ರಣ ಬದಲಿಸಲು ನಮ್ಮ ಸರ್ಕಾರ 16 ಸಾವಿರ ಕೋಟಿ ರೂಪಾಯಿ ಮೊತ್ತದ ಬೃಹತ್ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದೆ. ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ ಸುಮಾರು 15 ಸಾವಿರ ಕಿಮೀ ರಸ್ತೆ ಅಭಿವೃದ್ಧಿಗೆ 10 ಸಾವಿರ ಕೋಟಿ ರೂಪಾಯಿ, 6 ಸಾವಿರ ಕೋಟಿ ರೂಪಾಯನ್ನು ಪಂಚಾಯಿತಿ ಮಟ್ಟದ ಅಭಿವೃದ್ಧಿಗೆ ಮೀಸಲಿಡಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ‘ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ’ ಹಾಗೂ ‘ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆ’ಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
“ಇಷ್ಟು ಬೃಹತ್ ಮೊತ್ತದ ಅನುದಾನ ನೀಡಿರುವುದು ಗುತ್ತಿಗೆದಾರರ ಉದ್ದಾರಕ್ಕೆ, ಜೇಬು ತುಂಬಿಸೋಕಲ್ಲ. ಗ್ರಾಮೀಣ ಜನರ ಬದುಕು ಬದಲಾಯೊಸೋಕೆ ನೀಡಲಾಗುತ್ತಿದೆ. ಈ ಅನುದಾನದಲ್ಲಿ ಒಂದು ರೂಪಾಯಿಯೂ ದುರುಪಯೋಗವಾಗಬಾರದು. ಕಾಮಗಾರಿಗಳಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟ ಕಡ್ಡಾಯ” ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಾಲಕಾಲಕ್ಕೆ ಕಾಮಗಾರಿ ವಿಡಿಯೋ, ಫೋಟೋ ಕಳುಹಿಸಲು ಅಧಿಕಾರಿಗಳಿಗೆ ಸೂಚನೆ
“ಪ್ರತಿಯೊಂದು ಕಾಮಗಾರಿ ಆರಂಭಿಸುವ ಮೊದಲು ಸ್ಥಳದ ವಿಡಿಯೊ ಮತ್ತು ಛಾಯಾಚಿತ್ರಗಳನ್ನು ತೆಗೆದು ಕಡತದಲ್ಲಿ ದಾಖಲಿಸಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕದ ಚಿತ್ರಗಳನ್ನೂ ಸಂಗ್ರಹಿಸಬೇಕು. ಕಾಮಗಾರಿ ನಡೆಯುವ ಸ್ಥಳದ ನಿಖರ ನಿರ್ದೇಶಾಂಕಗಳನ್ನು ದಾಖಲಿಸಬೇಕು. ಟೆಂಡರ್ ಪ್ರಕ್ರಿಯೆ ಇಲ್ಲದೆ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವಂತಿಲ್ಲ. ಕಾಮಗಾರಿಗಳ ಪ್ರಗತಿಯನ್ನು ಮುಖ್ಯಮಂತ್ರಿ ಡ್ಯಾಶ್ ಬೋರ್ಡ್ ಮೂಲಕ ಪರಿಶೀಲಿಸಲಾಗುವುದು. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವ ಚಿತ್ರಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಬೇಕು. ಪ್ರತಿ ಪಂಚಾಯಿತಿ ಮತ್ತು ಜಿಲ್ಲಾಮಟ್ಟದಲ್ಲಿ ವಾಟ್ಸ್ ಆ್ಯಪ್ ಗುಂಪು ರಚಿಸಿ ಕಾಮಗಾರಿಗಳ ವಿವರಗಳನ್ನು ಹಂಚಿಕೊಳ್ಳಬೇಕು” ಎಂದರು.
“ರಸ್ತೆ ಚೆನ್ನಾಗಿದ್ದರೂ ಮತ್ತೆ ಅದೇ ರಸ್ತೆಗೆ ಹಣ ಖರ್ಚು ಮಾಡುವುದು, ಕಾಮಗಾರಿ ಮಾಡದೆ ಬಿಲ್ ಪಡೆಯುವುದು, ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಣ ದುರುಪಯೋಗ ಮಾಡುವುದು ನನ್ನ ಗಮನಕ್ಕೆ ಬಂದಿದೆ. ಇಂತಹ ಅಕ್ರಮಗಳಿಗೆ ಇನ್ನು ಅವಕಾಶವಿಲ್ಲ” ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು
15 ಸಾವಿರ ಕಿಮೀ ರಸ್ತೆ ಅಭಿವೃದ್ಧಿಗೆ 10 ಸಾವಿರ ಕೋಟಿ
“ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ ಸುಮಾರು 15 ಸಾವಿರ ಕಿಮೀ ರಸ್ತೆಗಳನ್ನು ಅಭಿವೃದ್ಧಿಪಡಿಸಲು 10 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ರಸ್ತೆ ಮರು ಡಾಂಬರೀಕರಣ, ಜಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಪ್ರತಿ ಕಿಲೋಮೀಟರ್ ನ ಕಾಮಗಾರಿಯ ಸ್ವರೂಪಕ್ಕೆ ಅನುಗುಣವಾಗಿ 38 ರಿಂದ 70 ಲಕ್ಷ ರೂಪಾಯಿ ವೆಚ್ಚವನ್ನು ಅಂದಾಜು ಮಾಡಲಾಗಿದೆ. ಈಗಾಗಲೇ ಪ್ರಗತಿ ಪಥ ಯೋಜನೆಯಡಿ 5 ಸಾವಿರ ಕೋಟಿ ಅನುದಾನವನ್ನೂ ನೀಡಲಾಗಿದೆ” ಎಂದು ಹೇಳಿದರು.
“6 ಸಾವಿರ ಕೋಟಿ ರೂಪಾಯನ್ನು ಪಂಚಾಯಿತಿ ಮಟ್ಟದ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಚರಂಡಿ, ಕುಡಿಯುವ ನೀರು ಹಾಗೂ ಅಗತ್ಯ ಮೂಲಸೌಕರ್ಯಗಳಿಗೆ ಈ ಹಣ ಬಳಕೆಯಾಗಲಿದೆ. ಯಾವ ಪಂಚಾಯಿತಿಯಲ್ಲಿ ಯಾವ ಕಾಮಗಾರಿ ಅಗತ್ಯವಿದೆ ಎಂಬುದನ್ನು ಗುರುತಿಸಿ, ಜಿಲ್ಲಾಧಿಕಾರಿಗಳ ಅನುಮತಿ ಮೂಲಕ ಅನುದಾನ ಬಿಡುಗಡೆ ಮಾಡಲಾಗುವುದು. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಅನುದಾನ ನೀಡಲಾಗುತ್ತಿದ್ದು, ಇದೊಂದು ದಾಖಲೆ” ಎಂದು ಹೇಳಿದರು.
ಮೊದಲ ಹಂತದಲ್ಲಿ 5 ಲಕ್ಷ ನಿವೇಶನ ಹಂಚಿಕೆ
“ರಾಜ್ಯದಲ್ಲಿ ಒಟ್ಟು 15 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ವಿತರಿಸಲು ನಿರ್ಧರಿಸಿದ್ದು, ಇದಕ್ಕಾಗಿ ಸುಮಾರು 9 ಸಾವಿರ ಎಕರೆ ಜಮೀನು ಗುರುತಿಸಲಾಗಿದೆ. ನಿವೇಶನಗಳ ಅಭಿವೃದ್ಧಿಗೆ ಅಗತ್ಯವಿರುವ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಗಳ ವೆಚ್ಚವನ್ನು ವಾಸ್ತವಿಕವಾಗಿ ಪರಿಶೀಲಿಸಿ ಯೋಜನೆ ರೂಪಿಸಲಾಗುವುದು” ಎಂದು ಹೇಳಿದರು.
ಬಡವರಿಗೂ 30/40 ಅಳತೆಯ ನಿವೇಶನ
“ಇನ್ನು ಮುಂದೆ ಬಡವರಿಗೆ ನೀಡುವ ನಿವೇಶನಗಳ ಅಳತೆಯನ್ನು ಕನಿಷ್ಠ 30X40 ಅಡಿಗೆ ನಿಗದಿಪಡಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಈ ಹಿಂದೆ 20X30 ಅಡಿ ನಿವೇಶನ ನೀಡಲಾಗುತ್ತಿತ್ತು. ಆದರೆ ಕುಟುಂಬ ಬೆಳೆದಂತೆ ಮನೆ ಕಟ್ಟಲು ಜಾಗ ಸಾಲುವುದಿಲ್ಲ. ಮತ್ತೆ ಹೊಸ ಕೊಳಚೆ ಪ್ರದೇಶಗಳು ಸೃಷ್ಟಿಯಾಗಬಾರದು. ಬಡವರ ಮಕ್ಕಳು ಕೂಡ ಭವಿಷ್ಯದಲ್ಲಿ ಉತ್ತಮ ಮನೆ ಕಟ್ಟಿಕೊಳ್ಳುವಂತಾಗಬೇಕು ಎಂಬ ಉದ್ದೇಶದಿಂದ 30X40 ಅಡಿ ನಿವೇಶನ ನೀಡಲು ನಿರ್ಧರಿಸಲಾಗಿದೆ. ಅಗತ್ಯವಿದ್ದರೆ ನಿವೇಶನಗಳ ಸಂಖ್ಯೆಯನ್ನು ಕಡಿಮೆ ಮಾಡಿಯಾದರೂ ದೊಡ್ಡ ನಿವೇಶನ ನೀಡಲಾಗುವುದು. ಮನೆ ಇಲ್ಲದ ಕುಟುಂಬಗಳಿಗೆ ನಿವೇಶನ ನೀಡುವಾಗ ಆದ್ಯತೆ ನೀಡಬೇಕು. ಈಗಾಗಲೇ ಮನೆ ಅಥವಾ ನಿವೇಶನ ಹೊಂದಿರುವವರಿಗೆ ಮತ್ತೊಮ್ಮೆ ಸೌಲಭ್ಯ ಕಲ್ಪಿಸಬಾರದು” ಎಂದು ಸ್ಪಷ್ಟಪಡಿಸಿದರು.
“ಹಳ್ಳಿಗಳು ಅಭಿವೃದ್ಧಿಯಾದರೆ ಮಾತ್ರ ಕರ್ನಾಟಕದ ಸಮಗ್ರ ಅಭಿವೃದ್ಧಿ ಸಾಧ್ಯ. ಉದ್ಯೋಗ, ಶಿಕ್ಷಣ ಮತ್ತು ಉತ್ತಮ ಬದುಕಿನ ಹುಡುಕಾಟದಲ್ಲಿ ಗ್ರಾಮೀಣ ಜನರು ನಗರಗಳತ್ತ ವಲಸೆ ಹೋಗುವುದನ್ನು ತಡೆಯಲು ಹಳ್ಳಿಗಳಲ್ಲೇ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರದ ಆದ್ಯತೆ” ಎಂದು ಹೇಳಿದರು.
ನಗರಗಳತ್ತ ವಲಸೆ ತಡೆಯಲು ಹಳ್ಳಿಗಳ ಅಭಿವೃದ್ಧಿ
“ಮಹಾತ್ಮ ಗಾಂಧೀಜಿ ಅವರು ಭಾರತದ ಆತ್ಮ ಹಳ್ಳಿಗಳಲ್ಲಿ ಇದೆ ಎಂದಿದ್ದರು. ಹಳ್ಳಿಗಳು ಅಭಿವೃದ್ಧಿಯಾದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂಬುದು ನಮ್ಮ ನಂಬಿಕೆ. ನಾನೂ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಗ್ರಾಮೀಣ ಜನರ ಸಮಸ್ಯೆಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅನುದಾನದ ಕೊರತೆಯಿಂದ ಎದುರಿಸುವ ಸಂಕಷ್ಟಗಳ ಅರಿವು ನನಗಿದೆ. ಹೀಗಾಗಿ ಪಂಚಾಯಿತಿಗಳಿಗೆ ಹೆಚ್ಚಿನ ಆರ್ಥಿಕ ಶಕ್ತಿ ನೀಡುವ ಉದ್ದೇಶದಿಂದ ಇಷ್ಟು ದೊಡ್ಡ ಮೊತ್ತದ ಅನುದಾನ ಒದಗಿಸಲಾಗಿದೆ” ಎಂದು ತಿಳಿಸಿದರು.
“ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ಈಗಾಗಲೇ ಶೇ.47ರಷ್ಟು ಜನಸಂಖ್ಯೆ ಸ್ಥಳಾಂತರಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಶೇ.76ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ವರದಿ ನೀಡಿದ್ದಾರೆ. ಉದ್ಯೋಗ, ಶಿಕ್ಷಣ ಹಾಗೂ ಉತ್ತಮ ಜೀವನದ ನಿರೀಕ್ಷೆಯಲ್ಲಿ ರೈತರ ಮಕ್ಕಳು ಊರು ತೊರೆಯುತ್ತಿದ್ದಾರೆ. ಈ ವಲಸೆ ತಡೆಯಬೇಕಾದರೆ ಹಳ್ಳಿಗಳಲ್ಲೇ ಉತ್ತಮ ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು” ಎಂದರು.
ಹಳ್ಳಿಗಳ ಅಭಿವೃದ್ಧಿಯೇ ಮೊದಲ ಆದ್ಯತೆ
“ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ಹಳ್ಳಿಗಳಲ್ಲಿ ಉದ್ಯಮ ಸ್ಥಾಪಿಸಲು ಮುಂದೆ ಬರುವವರಿಗೆ ಪಂಚಾಯಿತಿಗಳು ಅನಗತ್ಯ ತೊಂದರೆ ನೀಡಬಾರದು. ಕರಾವಳಿ ಮತ್ತು ಮಲೆನಾಡು ಭಾಗಗಳ ಅಭಿವೃದ್ಧಿಗೂ ವಿಶೇಷ ನೀತಿ ರೂಪಿಸಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ” ಎಂದು ಹೇಳಿದರು.
“ನಗರಗಳ ಅಭಿವೃದ್ಧಿಯಷ್ಟೇ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯೂ ಮುಖ್ಯ. ಸರ್ಕಾರಿ ಕಚೇರಿಗಳು ಮತ್ತು ಪಂಚಾಯಿತಿಗಳು ಜನರ ಕಷ್ಟ ಪರಿಹರಿಸುವ ಕೇಂದ್ರಗಳಾಗಬೇಕು. ರಸ್ತೆ, ಕುಡಿಯುವ ನೀರು, ನಿವೇಶನ, ಖಾತಾ ಸೇರಿದಂತೆ ಜನರ ಮೂಲಭೂತ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು. 16 ಸಾವಿರ ಕೋಟಿ ಗ್ರಾಮೀಣ ಜನರ ಬದುಕು ಬದಲಿಸುವುದಕ್ಕಾಗಿ. ಅಧಿಕಾರಿಗಳು ಇದನ್ನು ತಮ್ಮ ಕರ್ತವ್ಯವೆಂದು ಭಾವಿಸಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.
ಎರಡು ಕೋಟಿ ಜನರಿಗೆ ಆಸ್ತಿ ದಾಖಲೆ ಸರಿಪಡಿಸಲು ಅವಕಾಶ
“ಭೂ ಗ್ಯಾರಂಟಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿನ ಆಸ್ತಿ ದಾಖಲೆಗಳನ್ನು ಸರಿಪಡಿಸಿ ಅರ್ಹರಿಗೆ ಖಾತಾ ಒದಗಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು. ರಾಜ್ಯದಲ್ಲಿ ಸುಮಾರು ಎರಡು ಕೋಟಿ ಜನರಿಗೆ ಎ-ಖಾತಾ, ಬಿ-ಖಾತಾ ಸೇರಿದಂತೆ ಆಸ್ತಿ ದಾಖಲೆಗಳ ಸಮಸ್ಯೆ ಪರಿಹರಿಸಲು ಅವಕಾಶವಿದೆ. ಪ್ರತಿಯೊಂದು ಮನೆಗೂ ಭೇಟಿ ನೀಡಿ ಆಸ್ತಿಯ ಅಳತೆ, ಛಾಯಾಚಿತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಖಾತಾ ನೀಡಬೇಕು” ಎಂದರು.
“ನಕಲಿ ನೋಂದಣಿಗಳಿಗೆ ಅವಕಾಶ ನೀಡಬಾರದು. ಕಾನೂನುಬಾಹಿರವಾಗಿ ಸೃಷ್ಟಿಸಿರುವ ದಾಖಲೆಗಳನ್ನು ರದ್ದುಪಡಿಸುವ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಪ್ರತಿ ಪಂಚಾಯಿತಿಯಲ್ಲೂ ಪ್ರತ್ಯೇಕ ಕೌಂಟರ್ ತೆರೆದು ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಬೇಕು. ಜನರು ಸಣ್ಣಪುಟ್ಟ ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ತಪ್ಪಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
1,000 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್ಆರ್ ನೆರವು
“ರಾಜ್ಯದಲ್ಲಿ ಸುಮಾರು 6 ಸಾವಿರ ಪಂಚಾಯಿತಿಗಳಿದ್ದು, ಕನಿಷ್ಠ 3 ಸಾವಿರ ಪಂಚಾಯಿತಿ ಮಟ್ಟದ ಶಾಲೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ 1,000 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಕೈಗಾರಿಕೆಗಳು ಶಾಲೆಗಳನ್ನು ದತ್ತು ಪಡೆದು ಕಟ್ಟಡ, ಮೂಲಸೌಕರ್ಯ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಶಾಲೆಗಳ ನಿರ್ವಹಣೆ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಕೈಗಾರಿಕೆಗಳು ಹಣ ನೀಡುವುದಷ್ಟೇ ಅಲ್ಲ, ತಾವೇ ಶಾಲೆಗಳ ಅಭಿವೃದ್ಧಿಗೆ ಮುಂದಾಗಬೇಕು” ಎಂದು ಮನವಿ ಮಾಡಿದರು.
ಶೀಘ್ರ ಆರ್ ಓ ಘಟಕಗಳ ದುರಸ್ತಿಗೊಳಿಸಿ
“ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆ. ಹಿಂದೆ ಸ್ವಂತ ಹಣ ಹಾಗೂ ಟ್ರಸ್ಟ್ ಮೂಲಕ ಸುಮಾರು 300ಕ್ಕೂ ಹೆಚ್ಚು ಆರ್ ಓ ಘಟಕಗಳನ್ನು ಸ್ಥಾಪಿಸಲಾಗಿತ್ತು. ಕೆಲವು ಪಂಚಾಯಿತಿಗಳಿಗೆ ಅವುಗಳನ್ನು ಹಸ್ತಾಂತರಿಸಲಾಗಿದೆ. ಆದರೆ ಹಲವು ಕಡೆ ಅವುಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಮಾಹಿತಿ ಇದೆ. ಕೆಟ್ಟುಹೋಗಿರುವ ಆರ್ ಓ ಘಟಕಗಳನ್ನು ತಕ್ಷಣ ದುರಸ್ತಿಗೊಳಿಸಬೇಕು. ಪ್ರತಿ ತಿಂಗಳು ನೀರಿನ ಗುಣಮಟ್ಟ ಪರೀಕ್ಷೆ ನಡೆಸಬೇಕು. ಸಿಇಒಗಳು, ಇಒಗಳು ಹಾಗೂ ಪಿಡಿಒಗಳು ಈ ಜವಾಬ್ದಾರಿಯನ್ನು ಗಂಭೀರವಾಗಿ ನಿರ್ವಹಿಸಿ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುವಂತೆ ನೋಡಿಕೊಳ್ಳಬೇಕು” ಎಂದರು.
“ಬರಗಾಲದಿಂದ ರಾಜ್ಯದಲ್ಲಿ ಸುಮಾರು 60 ಸಾವಿರ ಕೋಟಿ ನಷ್ಟವಾಗಿದೆ. ಕೇಂದ್ರ ಸರ್ಕಾರದ ಬಳಿ 22 ಸಾವಿರ ಕೋಟಿ ಪರಿಹಾರ ಕೇಳಲಾಗಿದೆ. ರೈತರಿಗೆ ತಲಾ 5 ಸಾವಿರ ಪರಿಹಾರ ನೀಡುವ ನಿರ್ಧಾರ ಕೈಗೊಂಡಿದ್ದು, ಈಗಾಗಲೇ 2,500 ಬಿಡುಗಡೆ ಮಾಡಲಾಗಿದೆ. ಉಳಿದ ಮೊತ್ತವನ್ನೂ ಮುಂದಿನ ಹಂತದಲ್ಲಿ ಬಿಡುಗಡೆ ಮಾಡಲಾಗುವುದು. ಕೇಂದ್ರದಿಂದ ನ್ಯಾಯಯುತ ಪರಿಹಾರ ಪಡೆಯಲು ಕಾನೂನುಬದ್ಧ ಹೋರಾಟ ಮುಂದುವರಿಸಲಾಗುವುದು” ಎಂದು ತಿಳಿಸಿದರು.
“ಗ್ಯಾರಂಟಿ ಯೋಜನೆಗಳ ಜೊತೆಗೆ ರೈತರಿಗೆ ವಿದ್ಯುತ್ ಸಬ್ಸಿಡಿ, ಕುಡಿಯುವ ನೀರು, ಪಿಂಚಣಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸೇರಿದಂತೆ ವಿವಿಧ ಯೋಜನೆಗಳಿಗೂ ಸಾವಿರಾರು ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಸುಮಾರು ₹4.5 ಲಕ್ಷ ಕೋಟಿ ಗಾತ್ರದ ಬಜೆಟ್ ನಲ್ಲಿ ಎಲ್ಲ ವರ್ಗಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ” ಎಂದು ಹೇಳಿದರು.
ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡಕ್ಕೆ ಅವಕಾಶವಿಲ್ಲ
“ಸಿಇಒಗಳು, ಇಒಗಳು, ಪಿಡಿಒಗಳು ಹಾಗೂ ಇತರ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಶಾಸಕರು ಅಥವಾ ಸಚಿವರಿಂದ ಅನಗತ್ಯ ಒತ್ತಡ ಬಂದರೆ ಅದನ್ನು ಗೌಪ್ಯವಾಗಿ ಜಿಲ್ಲಾಧಿಕಾರಿ ಅಥವಾ ಸಿಇಒಗಳ ಮೂಲಕ ಸರ್ಕಾರಕ್ಕೆ ತಿಳಿಸಬಹುದು. ಅಧಿಕಾರಿಗಳು ಯಾರ ಭಯಕ್ಕೂ ಒಳಗಾಗದೆ ಕಾನೂನುಬದ್ಧವಾಗಿ ಕೆಲಸ ಮಾಡಬೇಕು. ಜಾತಿಗಿಂತ ನೀತಿ, ಪ್ರಾಮಾಣಿಕತೆ ಮತ್ತು ಕೆಲಸದ ಗುಣಮಟ್ಟಕ್ಕೆ ಸರ್ಕಾರ ಆದ್ಯತೆ ನೀಡುತ್ತದೆ” ಎಂದರು.
“ಸಚಿವರು ಪ್ರತಿ ತಿಂಗಳು ಎರಡು ಬಾರಿ ತಾಲೂಕುಗಳಿಗೆ ಭೇಟಿ ನೀಡಬೇಕು. ಶಾಸಕರು ಹೋಬಳಿ ಮತ್ತು ಪಂಚಾಯಿತಿ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಆಲಿಸಬೇಕು. ನಾನು ಸಹ ಪ್ರತಿ ಶನಿವಾರ ಒಂದೊಂದು ಪ್ರಜಾಸೇವಾ ಕೇಂದ್ರಕ್ಕೆ ಭೇಟಿ ನೀಡುತ್ತೇನೆ. ಜನರ ಅರ್ಜಿಗಳನ್ನು ಸ್ವೀಕರಿಸಿ ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬೇಕು. ಅಧಿಕಾರಿಗಳ ಪ್ರತಿದಿನದ ಕಾರ್ಯಚಟುವಟಿಕೆಗಳೂ ಜನರಿಗೆ ತಿಳಿಯಬೇಕು” ಎಂದರು.



