Kannada NewsKarnataka NewsLatestPolitics

ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ: ಕೃಪಾ ಆಳ್ವ ಸೇರಿ ಆರು ಮಂದಿಗೆ ಬಂಧನ ಭೀತಿ

ಪ್ರಗತಿವಾಹಿನಿ ಸುದ್ದಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಿ ವಿಡಿಯೋ ಪ್ರಸಾರ ಮಾಡಿದ ಷಡ್ಯಂತ್ರ ಪ್ರಕರಣದಲ್ಲಿ ಮಾಜಿ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಸೇರಿದಂತೆ ಆರು ಆರೋಪಿಗಳಿಗೆ ಸಂಕಷ್ಟ ಎದುರಾಗಿದೆ. ಆರೋಪಿಗಳು ಸಲ್ಲಿಸಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದ್ದು, ಇದೀಗ ಬಂಧನದ ಭೀತಿ ಎದುರಾಗಿದೆ.

ನವೆಂಬರ್ 20ರಂದು ಬೆಂಗಳೂರಿನ 66ನೇ ಸಿಸಿಹೆಚ್ ಸೆಷನ್ಸ್ ನ್ಯಾಯಾಲಯವು ಕೃಪಾ ಆಳ್ವ ಸೇರಿದಂತೆ ಆರು ಆರೋಪಿಗಳ ಅರ್ಜಿಗಳನ್ನು ತಿರಸ್ಕರಿಸಿ ಆದೇಶ ಹೊರಡಿಸಿದೆ. ಕೃಪಾ ಆಳ್ವ, ಪ್ರಜ್ವಲ್ ಪ್ರಸಾದ್, ಚಂದನ್ ಹೆಚ್.ಎಸ್., ಮೋಹನ್ ಗೌಡ, ಪ್ರಶಾಂತ್ ಕುಮಾರ್ ಮತ್ತು ವಿನೋದ್ ಕುಮಾರ್ ಬಂಧನ ಭೀತಿಯಲ್ಲಿರುವ ಆರೋಪಿಗಳು.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಈ ಹಿಂದೆ ಕೃಪಾ ಆಳ್ವ, ಪ್ರಜ್ವಲ್ ಪ್ರಸಾದ್, ಚಂದನ್, ಪ್ರಶಾಂತ್ ಕುಮಾರ್ ಹಾಗೂ ವಿನೋದ್ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ ವಿಚಾರಣೆ ವೇಳೆ ಆರೋಪಿಗಳು ಪೊಲೀಸರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದೆ ನುಣುಚಿಕೊಂಡಿದ್ದಾರೆ ಎನ್ನಲಾಗಿದೆ.

ಅಷ್ಟೇ ಅಲ್ಲ, ತನಿಖೆಗೆ ಅತ್ಯಗತ್ಯವಾಗಿದ್ದ ಮೊಬೈಲ್ ಫೋನ್‌ಗಳನ್ನು ಪೊಲೀಸರಿಗೆ ಹಸ್ತಾಂತರಿಸಲು ಆರೋಪಿಗಳು ಹಿಂದೇಟು ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು.

ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಗಳು ವಜಾಗೊಂಡಿರುವ ಹಿನ್ನೆಲೆಯಲ್ಲಿ, ಬಂಧನದಿಂದ ಪಾರಾಗಲು ಆರೋಪಿಗಳು ಇದೀಗ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

Related Articles

Back to top button