Belagavi NewsBelgaum NewsKannada NewsKarnataka NewsPolitics

*ಗಡಿ ಹೋರಾಟದ ಜತೆಗೆ ನೆಲ, ಜಲ, ಭಾಷೆ ರಕ್ಷಣೆಯೂ ಕನ್ನಡಿಗರ ಆದ್ಯತೆಯಾಗಲಿ*: *ಎಚ್.ಕೆ. ಪಾಟೀಲ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕನ್ನಡಪರ ಸಂಘಟನೆಗಳ ಹೋರಾಟ ಕೇವಲ ಗಡಿ ವಿವಾದಕ್ಕೆ ಸೀಮಿತವಾಗಬಾರದು. ಕನ್ನಡದ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ಸ್ವಾಭಿಮಾನದ ರಕ್ಷಣೆಗೂ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಶಾಸಕ ಹಾಗೂ ಮಾಜಿ ಗಡಿ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕರೆ ನೀಡಿದರು.

ನಗರದ ಎಸ್‌ಜಿಬಿಐಟಿ ಸಭಾಭವನದಲ್ಲಿ ಶನಿವಾರ ನಾಗನೂರು ರುದ್ರಾಕ್ಷಿ ಮಠದ ಸಹಯೋಗದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಹಾಗೂ ಸಮಾನ ಮನಸ್ಕ ಕನ್ನಡ ಸಂಘಟನೆಗಳ ವೇದಿಕೆ ಆಯೋಜಿಸಿದ್ದ ಕರ್ನಾಟಕದ ನೆಲ, ಜಲ ಮತ್ತು ಭಾಷೆ ಕುರಿತ ಸಮಾಲೋಚನೆ, ಸಂವಾದ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳಸಾ-ಬಂಡೂರಿ ಯೋಜನೆಯ ನೀರನ್ನು ಬಳಸಿಕೊಳ್ಳಲು ಕರ್ನಾಟಕ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ಅನುಷ್ಠಾನಗೊಳಿಸುವ ಭರವಸೆ ನೀಡಿದರೂ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ಇಂತಹ ಗಂಭೀರ ವಿಚಾರಗಳ ಬಗ್ಗೆ ಕನ್ನಡಪರ ಹೋರಾಟಗಾರರು ನಿರಂತರವಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು.

ಗಡಿ ಭಾಗದಲ್ಲಿ ಕೆಲವೇ ಕೆಲವು ಶಾಲೆಗಳನ್ನು ಆರಂಭಿಸಲು ದಶಕಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೆ, ಮತ್ತೊಂದೆಡೆ ಮ್ಯಾಗ್ನೆಟ್ ಹೆಸರಿನಲ್ಲಿ ರಾಜ್ಯದ 4 ಸಾವಿರಕ್ಕೂ ಅಧಿಕ ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಯತ್ನ ನಡೆಯುತ್ತಿದೆ. ಕನ್ನಡ ಶಾಲೆಗಳ ಉಳಿವಿಗಾಗಿ ಕೂಡ ಸಂಘಟನೆಗಳು ಹೋರಾಟ ನಡೆಸಬೇಕು ಎಂದು ತಿಳಿಸಿದರು.

ಗಡಿ ವಿಚಾರದಲ್ಲಿ ಕರ್ನಾಟಕದ ನಿಲುವು ಸ್ಪಷ್ಟವಾಗಿದೆ. ಮಹಾಜನ ವರದಿಯೇ ಅಂತಿಮವಾಗಬೇಕು ಅಥವಾ ಪ್ರಸ್ತುತ ಯಥಾಸ್ಥಿತಿ ಮುಂದುವರಿಯಬೇಕು ಎಂಬುದು ರಾಜ್ಯದ ನಿಲುವು. ಗಡಿ ಹೋರಾಟದ ಜತೆಗೆ ಜಲ ಮತ್ತು ಭಾಷೆಯ ಹಕ್ಕುಗಳ ರಕ್ಷಣೆಯೂ ಅಷ್ಟೇ ಮುಖ್ಯವಾಗಿದೆ ಎಂದರು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 386ನೇ ವಿಧಿಯಡಿ ಕರ್ನಾಟಕದ ಪರವಾಗಿ ಗೊತ್ತುವಳಿ ಅಂಗೀಕಾರವಾಗಿರುವುದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿ. ಇದಕ್ಕಾಗಿ ಶ್ರಮಿಸಿದ ಕನ್ನಡಪರ ಹೋರಾಟಗಾರರ ಕಾರ್ಯ ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾವೇರಿ ವಿಚಾರದಲ್ಲಿ ಅಧಿಸೂಚನೆ ಹೊರಡಿಸಲು ಸಾಧ್ಯವಾಗುವಾಗ ಕೃಷ್ಣಾ ನದಿ ವಿಚಾರದಲ್ಲಿ ವಿಳಂಬವೇಕೆ ಎಂಬ ಪ್ರಶ್ನೆ ಎದುರಾಗಿದೆ. ಮಹದಾಯಿ, ಕೃಷ್ಣಾ ಹಾಗೂ ತುಂಗಭದ್ರಾ ನದಿ ನೀರಿನ ವಿವಾದಗಳು ಕೇವಲ ರೈತರ ಸಮಸ್ಯೆಗಳಲ್ಲ. ಅವು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಾಗಿವೆ. ಹೀಗಾಗಿ ವೈಜ್ಞಾನಿಕ ಅಧ್ಯಯನ ಹಾಗೂ ಸೂಕ್ತ ದಾಖಲೆಗಳ ಆಧಾರದಲ್ಲಿ ಜಲ ಹಕ್ಕಿಗಾಗಿ ಹೋರಾಟ ರೂಪಿಸಬೇಕು ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಸಂತೋಷ ಈ. ಚಿನಗುಡಿ ಮಾತನಾಡಿ, ಕನ್ನಡಾಭಿಮಾನ ಕೇವಲ ಮೆರವಣಿಗೆ, ಘೋಷಣೆ ಹಾಗೂ ಸಂಭ್ರಮಾಚರಣೆಗೆ ಸೀಮಿತವಾಗಬಾರದು. ಕನ್ನಡದ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಮತ್ತು ಮಹನೀಯರ ಸಾಧನೆಗಳನ್ನು ವಿಶ್ವಕ್ಕೆ ಪರಿಚಯಿಸುವ ಕಾರ್ಯವಾಗಬೇಕು ಎಂದರು.

ಬೆಳಗಾವಿಯ ಚಕ್ರವರ್ತಿ ಕೃಷ್ಣದೇವರಾಯ ವೃತ್ತದಲ್ಲಿ ಅವರ ಪ್ರತಿಮೆ ಸ್ಥಾಪಿಸುವ ಮೂಲಕ ಐತಿಹಾಸಿಕ ಮಹತ್ವವನ್ನು ಸಾರಬೇಕು. ನಗರಕ್ಕೆ ಆಗಮಿಸುವವರಿಗೆ ಕರ್ನಾಟಕದ ಇತಿಹಾಸ ಹಾಗೂ ಕನ್ನಡದ ಅಸ್ಮಿತೆ ಪರಿಚಯಿಸುವ ಸ್ಮಾರಕಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಉತ್ತರ ಕರ್ನಾಟಕದ ಭಾಷೆ ಮತ್ತು ಜನರನ್ನು ಒರಟರು ಎಂದು ಹೀಯಾಳಿಸುವ ಪ್ರವೃತ್ತಿಯನ್ನು ಕನ್ನಡಿಗರು ಸಹಿಸಬಾರದು. ಶರಣರ ವಚನಗಳು, ದಾಸರ ಪದಗಳು, ಸರ್ವಜ್ಞನ ತ್ರಿಪದಿಗಳು, ಜಾನಪದ ಹಾಡುಗಳು ಹಾಗೂ ರನ್ನ, ಪಂಪ, ಕುಮಾರವ್ಯಾಸರ ಸಾಹಿತ್ಯವೇ ಕನ್ನಡ ಭಾಷೆಯ ಶ್ರೀಮಂತಿಕೆಗೆ ಸಾಕ್ಷಿ. ಕೆಲವರ ಹಾಸ್ಯ ಭಾಷಣಗಳಲ್ಲಿನ ಬೈಗುಳಗಳನ್ನು ಇಡೀ ಉತ್ತರ ಕರ್ನಾಟಕದ ಭಾಷೆಗೆ ಹೋಲಿಸುವುದು ಸರಿಯಲ್ಲ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ರಾಜಕೀಯ, ಸಾಮಾಜಿಕ ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕನ್ನಡದ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು. ಕನ್ನಡದ ನೆಲ, ಭಾಷೆ ಮತ್ತು ಪರಂಪರೆಯ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಸಂಘಟಿತ ಹೋರಾಟದಿಂದ ಸರ್ಕಾರದ ಗಮನ ಸೆಳೆಯಲು ಸಾಧ್ಯವಿದ್ದು, ಕನ್ನಡದ ಕೆಲಸಗಳಿಗೆ ನಾಗನೂರು ರುದ್ರಾಕ್ಷಿ ಮಠ ಸದಾ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ಗಡಿ ವಿವಾದಕ್ಕೆ ಸಂಬಂಧಿಸಿದ ಕಾನೂನು ಹೋರಾಟ ಹಾಗೂ ರಾಜ್ಯದ ಹಿತಾಸಕ್ತಿ ರಕ್ಷಣೆಗೆ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಕನ್ನಡಿಗರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದರು.

ಕನ್ನಡ ಶಾಲೆಗಳ ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕಲ್ಪಿಸುವುದಾಗಿ ಎಚ್.ಕೆ. ಪಾಟೀಲ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನ.29ರಂದು ಮಧ್ಯಾಹ್ನ 4 ಗಂಟೆಗೆ ನಾಗನೂರು ಮಠದಲ್ಲಿ ಉತ್ತರ ಕರ್ನಾಟಕದ ಶಾಸಕರ ಸಭೆ ಕರೆದು ಚರ್ಚೆ ನಡೆಸಬೇಕು ಎಂದು ಸ್ವಾಮೀಜಿಗಳಿಗೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯಲ್ಲಿ ಕನ್ನಡಪರ ನಿರ್ಣಯ ಅಂಗೀಕಾರವಾಗಲು ಶ್ರಮಿಸಿದ 100ಕ್ಕೂ ಹೆಚ್ಚು ಕನ್ನಡಪರ ಹೋರಾಟಗಾರರನ್ನು ಸನ್ಮಾನಿಸಲಾಯಿತು. ಕನ್ನಡ ಸಂಘಟನೆಗಳ ಮುಖಂಡರಾದ ಮಹಾದೇವ ತಳವಾರ, ಬಲರಾಮ ಮಾಸೆನಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಂಕರ ಬಾಗೇವಾಡಿ ಕಾರ್ಯಕ್ರಮ ನಿರೂಪಿಸಿದರು.

Related Articles

Back to top button