CrimeKannada NewsKarnataka News

*ಮಗಳನ್ನು ರಕ್ಷಿಸಲು ನೀರಿಗೆ ಧುಮುಕಿದ ತಾಯಿಯೂ ಸಾವು*

ಪ್ರಗತಿವಾಹಿನಿ ಸುದ್ದಿ: ಮಗಳು ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದನ್ನು ಕಂಡು ರಕ್ಷಿಸಲು ಧಾವಿಸಿದ ತಾಯಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಬೆಂಗಳೂರಿನ ಬನಶಂಕರಿ ನಿವಾಸಿಗಳಾದ ಸಲ್ಮಾ (37) ಮತ್ತು ಅವರ ಪುತ್ರಿ ಸಾದಿಕಾ (14) ಮೃತಪಟ್ಟ ದುರ್ದೈವಿಗಳು. ಮೂಲತಃ ನಿಮ್ಮಕಾಯಲಹಳ್ಳಿಯವರಾದ ಸಲ್ಮಾ, ಮಗಳೊಂದಿಗೆ ತಮ್ಮ ತವರು ಗ್ರಾಮಕ್ಕೆ ಬಂದಿದ್ದರು.

ಈ ವೇಳೆ ಗ್ರಾಮದ ಹೊರವಲಯದಲ್ಲಿರುವ ಕುಂಟೆಯ ಬಳಿ ವಿಹಾರಕ್ಕೆ ತೆರಳಿದ್ದಾಗ ಸಾದಿಕಾ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಮಗಳನ್ನು ರಕ್ಷಿಸುವ ಆತುರದಲ್ಲಿ ತಾಯಿ ಸಲ್ಮಾ ಕೂಡಲೇ ಕುಂಟೆಗೆ ಇಳಿದಿದ್ದಾರೆ. ಆದರೆ ಕುಂಟೆಯ ಆಳದ ಅರಿವಿಲ್ಲದೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತಾಯಿ-ಮಗಳ ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಬಟ್ಲಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ತಾಯಿ-ಮಗಳ ದುರಂತ ಸಾವಿನಿಂದ ಕುಟುಂಬಸ್ಥರು ಹಾಗೂ ಗ್ರಾಮದಲ್ಲಿ ಶೋಕ ಆವರಿಸಿದೆ.

Related Articles

Back to top button