
ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕರಿಗೆ ಅನಗತ್ಯ ಅಲೆದಾಟ, ಮಧ್ಯವರ್ತಿಗಳ ಹಾವಳಿ, ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿರುವ ಘಟನೆ ನಡೆದಿದೆ.
ಏಕಕಾಲಕ್ಕೆ ಜಿಲ್ಲೆಯ 9 ಉಪನೋಂದಣಾಧಿಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆಯ ಎಂಟು ಸಬ್ ರಿಜಿಶ್ತ್ರಾರ್ ಕಚೇರಿಗಳ ಮೇಲೆ ಈ ದಾಳಿ ನಡೆದಿದೆ.
ಬಾಗಲಕೋಟೆ, ಬಾದಾಮಿ, ಹುನಗುಂದ, ಮುಧೋಳ, ಬೀಳಗಿ, ತೇರದಾಳ, ಇಳಕಲ್, ಗುಳೇದಗುಡ್ಡ ಹಾಗೂ ಕೆರೂರು ಕಚೇರಿಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಲೋಕಾಯುಕ್ತ ಎಸ್‌ಪಿ ಮಹಾಲಿಂಗ ನಂದಗಾಂವಿ ನಿರ್ದೇಶನದಲ್ಲಿ, ಡಿವೈಎಸ್‌ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ 7 ಸಿಪಿಐ ಹಾಗೂ 24 ಸಿಬ್ಬಂದಿ ಒಳಗೊಂಡ 32 ಜನರ ತಂಡ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ.
ಕಾರ್ಯಾಚರಣೆ ಮುಂದುವರೆದಿದ್ದು, ಪರಿಶೀಲನಾ ವರದಿಯ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ಲೋಕಾಯುಕ್ತ ಎಸ್.ಪಿ ಮಹಾಲಿಂಗ್ ನಂದಗಾಂವಿ ತಿಳಿಸಿದ್ದಾರೆ.



