*ಖಾನಾಪುರದಲ್ಲಿ ಅಕ್ರಮ ಗೋವಾ ಮದ್ಯ ಸಾಗಾಟ*: *ಮದ್ಯ, ಕಾರು ಜಪ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಕಾರನ್ನು ಅಬಕಾರಿ ಅಧಿಕಾರಿಗಳು ಖಾನಾಪುರ ತಾಲೂಕಿನ ಕಣಕುಂಬಿ ತನಿಖಾ ಠಾಣೆ ಬಳಿ ವಶಕ್ಕೆ ಪಡೆದಿದ್ದಾರೆ.
ನವೆಂಬರ್ 23ರಂದು ಬೆಳಿಗ್ಗೆ 7.05ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ಕಣಕುಂಬಿ ತನಿಖಾ ಠಾಣೆ ಮುಂಭಾಗದ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಗೋವಾ ಕಡೆಯಿಂದ ಬಂದ ಕೆಎ-41 ಡಿ-0123 ನೋಂದಣಿ ಸಂಖ್ಯೆಯ ಸ್ವಿಫ್ಟ್ ಡಿಜೈರ್ ಕಾರನ್ನು ತಪಾಸಣೆ ಮಾಡಿದಾಗ, ವಿವಿಧ ನಮೂನೆಯ ಗೋವಾ ಮದ್ಯದ ಒಟ್ಟು 22.250 ಲೀಟರ್ ಬಾಟಲಿಗಳು ಪತ್ತೆಯಾಗಿವೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ರಾಜು ಅಶೋಕ ಪೂಜಾರಿ (34) ಎಂಬಾತ ಕಾರಿನಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಆರೋಪಿತನಿಗೆ ಬಿಎನ್ಎಸ್ಎಸ್ ಕಾಯ್ದೆ 2023ರ ಕಲಂ 35(3)ರ ಅಡಿಯಲ್ಲಿ ಮುಂದಿನ ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಪ್ರಕರಣದಲ್ಲಿ ಎ-2 ಆಗಿರುವ ವಾಹನದ ಮಾಲೀಕನನ್ನು ಪತ್ತೆಹಚ್ಚಿ ಬಂಧಿಸಲು ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ದಾಳಿಯಲ್ಲಿ 21,050 ರೂ. ಮೌಲ್ಯದ ಮದ್ಯ ಹಾಗೂ 3 ಲಕ್ಷ ರೂ. ಮೌಲ್ಯದ ಕಾರು ಸೇರಿದಂತೆ ಒಟ್ಟು 3,21,050 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಅಬಕಾರಿ ಅಪರ ಆಯುಕ್ತ ಡಾ. ವೈ. ಮಂಜುನಾಥ, ಜಂಟಿ ಆಯುಕ್ತ ಎಫ್.ಎಚ್. ಚಲವಾದಿ ಹಾಗೂ ಅಬಕಾರಿ ಉಪ ಆಯುಕ್ತ ಜಗದೀಶ ಎನ್.ಕೆ. ಅವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ಮಂಜುನಾಥ ಮಳ್ಳಿಗೇರಿ, ಉಪ ನಿರೀಕ್ಷಕ ಸುನೀಲ ಎಸ್. ಪಾಟೀಲ, ಕಣಕುಂಬಿ ತನಿಖಾ ಠಾಣೆಯ ಅಬಕಾರಿ ನಿರೀಕ್ಷಕ ಬಾಳಗೌಡ ಪಾಟೀಲ, ಉಪ ನಿರೀಕ್ಷಕ ಅಗಸರ ಹಾಗೂ ಸಿಬ್ಬಂದಿ ಮತ್ತು ಗೃಹರಕ್ಷಕ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಪ್ರಕರಣ ದಾಖಲಿಸಿಕೊಂಡಿರುವ ಅಬಕಾರಿ ನಿರೀಕ್ಷಕ ಮಂಜುನಾಥ ಮಳ್ಳಿಗೇರಿ ಮುಂದಿನ ತನಿಖೆ ಕೈಗೊಂಡಿದ್ದಾರೆ.




