Belagavi NewsBelgaum NewsKannada NewsKarnataka NewsPolitics

*ಜಾರಕಿಹೊಳಿ ಫೋಟೊ ಕಿಸೆಯಲ್ಲಿಟ್ಟುಕೊಂಡು ತಿರುಗಾಡಲಿ*: *ಲಕ್ಷ್ಮಣ ಸವದಿ ವಿರುದ್ಧ ಕುಮಟಳ್ಳಿ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಾಸಕ ಲಕ್ಷ್ಮಣ ಸವದಿ ವಿರುದ್ಧ ಮಾಜಿ ಶಾಸಕ ಮಹೇಶ್ ಕುಮಟಳ್ಳಿ ತೀವ್ರ ವಾಗ್ದಾಳಿ ನಡೆಸಿದ್ದು, ಸವದಿ ಅವಕಾಶವಾದಿ ರಾಜಕಾರಣಿ ಎಂದು ಟೀಕಿಸುವುದರ ಜೊತೆಗೆ ಅಥಣಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ‘ಅರೆಹುಚ್ಚ’ ಎಂದು ಕರೆದಿರುವ ಸವದಿ ಹೇಳಿಕೆಗೆ ತಿರುಗೇಟು ನೀಡಿದರು. ಸವದಿ ತಾಳ್ಮೆ ಕಳೆದುಕೊಂಡಿದ್ದಾರೆ. 2019ರಲ್ಲಿ ತಾವು ಸೇರಿದಂತೆ 17 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದಿದ್ದರಿಂದಲೇ ಸವದಿ ಅವರಿಗೆ ಎಂಎಲ್‌ಸಿ ಹಾಗೂ ಉಪಮುಖ್ಯಮಂತ್ರಿ ಸ್ಥಾನ ಪಡೆಯಲು ಸಾಧ್ಯವಾಯಿತು. ರಮೇಶ್ ಜಾರಕಿಹೊಳಿ ಮತ್ತು ನಾನು ಪಕ್ಷಕ್ಕೆ ಬಂದಿದ್ದರಿಂದ ಅವರಿಗೆ ರಾಜಕೀಯ ಅವಕಾಶ ಸಿಕ್ಕಿದೆ. ಹೀಗಾಗಿ ನಮ್ಮಿಬ್ಬರ ಫೋಟೊವನ್ನು ಸವದಿ ತಮ್ಮ ಕಿಸೆಯಲ್ಲಿ ಇಟ್ಟುಕೊಂಡು ತಿರುಗಾಡಬೇಕು ಎಂದು ವ್ಯಂಗ್ಯವಾಡಿದರು.

ಬಿಜೆಪಿಯಲ್ಲಿ ಅನುಕೂಲವಿದ್ದಾಗ ಪಕ್ಷವನ್ನು ಹೊಗಳಿ, ಅನುಕೂಲ ಇಲ್ಲದಿದ್ದಾಗ ಟೀಕಿಸುವುದು ಸವದಿ ಅವರ ಪ್ರವೃತ್ತಿ. ನಮ್ಮಲ್ಲಿ ಪಕ್ಷದ ಬದ್ಧತೆ ಇದೆ. ಒಂದು ಕಪ್ ಚಹಾ ಕುಡಿಸಿದರೂ ಅದನ್ನು ನೆನಪಿಟ್ಟುಕೊಳ್ಳುವವರು ನಾವು. ಅವರಂತೆ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಪಕ್ಷ ಬದಲಾಯಿಸುವವರಲ್ಲ ಎಂದು ಟೀಕಿಸಿದರು.

ವಿದ್ಯುತ್ ವಿಚಾರವಾಗಿಯೂ ಈ ಹಿಂದೆ ಸವದಿ ಅವರು ಡಿ.ಕೆ.ಶಿವಕುಮಾರ ಅವರಿಗೆ ಸವಾಲು ಹಾಕಿದ್ದರು. ಆದರೆ, ತಾವು ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನೇ ಸವದಿ ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.

ಅಥಣಿ ಕ್ಷೇತ್ರದ ಅಭಿವೃದ್ಧಿ ಕುರಿತು ಮಾತನಾಡಿದ ಅವರು, ಅಮ್ಮಾಜೇಶ್ವರಿ ಯೋಜನೆಗೆ ₹1,486.41 ಕೋಟಿ ವೆಚ್ಚದಲ್ಲಿ ಟೆಂಡರ್ ಆಗಿದ್ದು, 2023ರ ಮಾರ್ಚ್ 29ರಂದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ದಿನಾಂಕವನ್ನು ಮರೆಯಬಾರದು. ನನ್ನ ಹುಟ್ಟುಹಬ್ಬವನ್ನೇ ನಾನು ನೆನಪಿಟ್ಟುಕೊಳ್ಳುವುದಿಲ್ಲ, ಆದರೆ ಈ ಯೋಜನೆಯ ಟೆಂಡರ್ ದಿನಾಂಕವನ್ನು ನೆನಪಿಟ್ಟುಕೊಳ್ಳಿ ಎಂದರು.

ಅಲ್ಲದೆ, ಕೃಷ್ಣಾ ನದಿಗೆ ತಡೆಗೋಡೆ ನಿರ್ಮಾಣಕ್ಕೆ ₹28.50 ಕೋಟಿ ಅನುದಾನ ತಂದಿದ್ದೆವು. ಆದರೆ, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಯ ನೀಡದ ಕಾರಣ ಕಾಮಗಾರಿ ಮುಂದುವರಿಯಲಿಲ್ಲ. ಇದಕ್ಕೂ ಸವದಿಯವರೇ ಕಾರಣ ಎಂದು ಆರೋಪಿಸಿದರು.

**ಅಥಣಿ ಜಿಲ್ಲೆ ರಚನೆಗೆ ಆಗ್ರಹ**

ಅಥಣಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಬೇಕು. ಇಲ್ಲವಾದರೆ ಅಥಣಿ ತಾಲೂಕನ್ನು ವಿಜಯಪುರ ಜಿಲ್ಲೆಗೆ ಸೇರಿಸಬೇಕು ಎಂದು ಕುಮಟಳ್ಳಿ ಒತ್ತಾಯಿಸಿದರು.

ಅಥಣಿಯಿಂದ ವಿಜಯಪುರಕ್ಕೆ ಕೇವಲ 70 ಕಿ.ಮೀ. ಅಂತರವಿದ್ದರೆ, ಕೊಟ್ಟಲಗಿಯಿಂದ ಬೆಳಗಾವಿಗೆ ಸುಮಾರು 200 ಕಿ.ಮೀ. ದೂರವಿದೆ. ಇದರಿಂದ ಅಥಣಿ ಭಾಗದ ಜನರು ಆಡಳಿತಾತ್ಮಕ ಕೆಲಸಗಳಿಗಾಗಿ ಬೆಳಗಾವಿಗೆ ತೆರಳಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಜನರ ಅನುಕೂಲ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಅಥಣಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರಚಿಸಬೇಕು. ಅದು ಸಾಧ್ಯವಾಗದಿದ್ದರೆ ವಿಜಯಪುರ ಜಿಲ್ಲೆಗೆ ಸೇರಿಸುವ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಮಹೇಶ್ ಕುಮಟಳ್ಳಿ ಆಗ್ರಹಿಸಿದರು.

Related Articles

Back to top button