Kannada NewsLatestNationalPolitics

*ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಪೊಲೀಸ್ ವಶಕ್ಕೆ*: *750 ಜನರಿಗೆ ಗೃಹಬಂಧನ*

ಪ್ರಗತಿವಾಹಿನಿ ಸುದ್ದಿ: ಕಾರ್ತಿಕ ದೀಪೋತ್ಸವಕ್ಕೂ ಮುನ್ನ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ 750 ಜನರಿಗೆ ಗೃಹಬಂಧನದಲ್ಲಿ ಇಡಲಾಗಿದೆ.

ಕಾರ್ತಿಕ ದೀಪೋತ್ಸವದ ಆಚರಣೆಗೂ ಮುನ್ನ ಮಧುರೈನಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಬಿಜೆಪಿಯ ಸುಮಾರು 750 ನಾಯಕರು ಮತ್ತು ಹಿಂದೂ ಮುನ್ನಣಿ ಪದಾಧಿಕಾರಿಗಳನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ತಿರುಪ್ಪರಂಕುಂಡ್ರಂ ಬೆಟ್ಟಕ್ಕೆ ಪ್ರಯಾಣಿಸದಂತೆ ತಡೆಯಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲಿರುವ ವಿವಾದಿತ ಕಲ್ಲಿನ ಸ್ತಂಭವಾದ ‘ದೀಪತೂಣ್’ ಬಳಿ ಕಾರ್ತಿಕ ದೀಪ ಬೆಳಗಿಸುವ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ರಾಜಕೀಯ ಹಾಗೂ ಧಾರ್ಮಿಕ ಉದ್ವಿಗ್ನತೆ ತೀವ್ರಗೊಂಡಿದೆ.

ನವೆಂಬರ್ 24, ಇಂದು ಬೆಟ್ಟದ ಮೇಲಿರುವ ‘ದೀಪತೂಣ್’ ಬಳಿ ಸಾಂಪ್ರದಾಯಿಕ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ ಬಳಿಕ ಈ ಆರೋಪಗಳು ಕೇಳಿಬಂದಿವೆ. ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾಗದಂತೆ ತಡೆಯಲು ತಮಿಳುನಾಡು ಸರ್ಕಾರವು ಈ ಪ್ರದೇಶದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದು, 5,600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ.

ಧಾರ್ಮಿಕ ಕಾರ್ಯಕ್ರಮಕ್ಕಾಗಿ ತಮ್ಮ ನಾಯಕರು ಮತ್ತು ಹಿಂದೂ ಸಂಘಟನೆಗಳು ಬೆಟ್ಟವನ್ನು ತಲುಪದಂತೆ ರಾಜ್ಯ ಸರ್ಕಾರ ತಡೆಯಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಮಧುರೈ ಮತ್ತು ಸುತ್ತಮುತ್ತಲಿನ ನಾಲ್ಕು ದಕ್ಷಿಣ ಜಿಲ್ಲೆಗಳಲ್ಲಿ ಸುಮಾರು 750 ಬಿಜೆಪಿ ಪದಾಧಿಕಾರಿಗಳು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಗೃಹಬಂಧನದಲ್ಲಿರಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ತಿರುಪ್ಪರಂಕುಂಡ್ರಂ ಬೆಟ್ಟ ಮತ್ತು ಮಧುರೈ ನಗರದಾದ್ಯಂತ ಸುಮಾರು 5,600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಬೆಟ್ಟದ ಮೇಲೆ ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿದೆ. 70ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಈ ಆದೇಶವು ಸೋಮವಾರ ರಾತ್ರಿ 9 ಗಂಟೆಗೆ ಜಾರಿಗೆ ಬಂದಿದ್ದು, ನವೆಂಬರ್ 25ರ ಬೆಳಿಗ್ಗೆ 10 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಅಧಿಕೃತ ದೇವಾಲಯದ ಆಚರಣೆಗಳು, ಸುಪ್ರೀಂ ಕೋರ್ಟ್ ಆದೇಶದ ವ್ಯಾಪ್ತಿಗೆ ಬರುವ ಚಟುವಟಿಕೆಗಳು ಮತ್ತು ದರ್ಗಾಕ್ಕೆ ಭೇಟಿ ನೀಡುವುದು ಸೇರಿದಂತೆ ಇತರ ಕಾನೂನುಬದ್ಧ ಧಾರ್ಮಿಕ ಚಟುವಟಿಕೆಗಳಿಗೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ.

Related Articles

Back to top button