*ಮಳೆ, ಚಳಿಯಲ್ಲಿಯೂ ನಿರಂತರ ಹೋರಾಟ*; *ನೋಡಿ ಬೇಸರವಾಗುತ್ತಿದೆ*: *ಭಾವುಕರಾದ ನಟಿ ರಮ್ಯಾ*

ಪ್ರಗತಿವಾಹಿನಿ ಸುದ್ದಿ: ಮಾಸಿಕ 15 ಸಾವಿರ ರೂಪಾಯಿ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಸುತ್ತಿರುವ ಹೋರಾಟ 8ನೇ ದಿನಕ್ಕೆ ಕಾಲಿಟ್ಟಿದೆ.
ಈ ನಡುವೆ ಆಶಾ ಕಾರ್ಯಕರ್ತರ ಹೋರಾಟಕ್ಕೆ ಮಾಜಿ ಸಂಸದರು, ನಟಿಯರಾದ ರಮ್ಯಾ, ಸುಮಲತಾ ಅಂಬರೀಷ್ ಬೆಂಬಲ ನೀಡಿದ್ದಾರೆ. ಇಂದು ಫ್ರೀಡಂ ಪಾರ್ಕ್ ಗೆ ಆಗಮಿಸಿದ ನಟಿ ರಮ್ಯಾ, ಹೋರಾಟ ನಿರತ ಆಶಾ ಕಾರ್ಯಕರ್ತೆಯರ ಅಳಲು ಆಲಿಸಿದರು. ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರೊಂದಿಗೆ ಕೆಲ ಕಾಲ ಚರ್ಚೆ ನಡೆಸಿದರು.
ಈ ವೇಳೆ ಮಾತನಾಡಿದ ರಮ್ಯಾ, ಸರ್ಕಾರ ಖಂಡಿತಾ ಬೇಡಿಕೆಗಳನ್ನು ಈಡೇರಿಸಲಿದೆ ಎಂದು ಭರವಸೆ ನೀಡಿದರು. ‘ನಿಮ್ಮನ್ನು ನೋಡಿ ಸಂಕಟ ಆಗುತ್ತಿದೆ. ಮಳೆ, ಚಳಿ, ಬಿಸಿಲು ಏನೇ ಇರಲಿ ನೀವೆಲ್ಲ ಇಲ್ಲಿ ಇದ್ದೀರಿ. ಇದು ಹೆಣ್ಣು ಮಕ್ಕಳಲ್ಲಿ ಇರುವ ಶಕ್ತಿ. ಆದರೂ ನನಗೆ ಬೇಸರ ಆಗುತ್ತಿದೆ. ನೀವು ಕೇಳುತ್ತಿರುವುದರಲ್ಲಿ ಏನೂ ತಪ್ಪು ಇಲ್ಲ ಎಂದು ಭಾವುಕರಾದರು.
ಕಳೆದ ವಾರ ನಾನು ಸಚಿವರಾದ ಯು.ಟಿ ಖಾದರ್ ಅವರನ್ನು ಭೇಟಿ ಮಾಡಿದ್ದೆ. ಆಶಾ ಕಾರ್ಯಕರ್ತೆಯರೇ ನಮ್ಮ ಸಾರ್ವಜನಿಕ ಆರೋಗ್ಯದ ಬೆನ್ನೆಲುಬು ಅಂತ ಅವರು ಹೇಳಿದರು. ನನಗೆ ತುಂಬಾ ನಂಬಿಕೆ ಇದೆ. ನಮ್ಮ ಸರ್ಕಾರ ಖಂಡಿತಾ ನಿಮ್ಮ ಬೇಡಿಕೆಯನ್ನು ಪೂರೈಸುತ್ತದೆ ಎಂದು ಹೇಳಿದರು.
ನೀವು ಇಲ್ಲದೇ ಏನೂ ಆಗಲ್ಲ. ನನ್ನ ಕೈಯಲ್ಲಿ ಆದಷ್ಟು ಪ್ರಯತ್ನ ಮಾಡುತ್ತೇನೆ. ನಿಮ್ಮ ಬೇಡಿಕೆಗಳ ಬಗ್ಗೆ’ ಸಿಎಂ ಜೊತೆ ನಾನು ಮಾತನಾಡುತ್ತೇನೆ. ಅವರು ಕೇಳುತ್ತಿರುವುದರಲ್ಲಿ ತಪ್ಪಿಲ್ಲ ಎನ್ನುತ್ತೇನೆ. ಸಿಎಂ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿ, ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸುತ್ತಾರೆ ಎಂಬ ಭರವಸೆಯಿದೆ ಎಂದು ಹೇಳಿದರು.




