*ಇಸ್ರೇಲ್ಗೆ ಉದ್ಯೋಗಕ್ಕೆ ತೆರಳಿದ್ದ ಮಂಗಳೂರಿನ ವ್ಯಕ್ತಿ ನಿಗೂಢ ಸಾವು*: *ಕುಟುಂಬಕ್ಕೆ ಕಾಡುತ್ತಿದೆ ಹಲವು ಅನುಮಾನ*

ಪ್ರಗತಿವಾಹಿನಿ ಸುದ್ದಿ: ಉದ್ಯೋಗ ಅರಸಿ ವಿದೇಶಕ್ಕೆ ತೆರಳಿದ್ದ ಮಂಗಳೂರಿನ ವ್ಯಕ್ತಿಯೊಬ್ಬರು ನಿಗೂಢವಾಗಿ ಮೃತಪಟ್ಟಿದ್ದಾರೆ. ಒಂದೂವರೆ ವರ್ಷದಿಂದ ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿದ್ದ ಅವರು, ದಿಢೀರ್ ಕುಟುಂಬದ ಸಂಪರ್ಕದಿಂದ ದೂರವಾಗಿದ್ದರು. ಹಲವು ದಿನಗಳ ಹುಡುಕಾಟದ ಬಳಿಕ ಅವರ ಸಾವಿನ ಸುದ್ದಿ ಕುಟುಂಬಕ್ಕೆ ತಲುಪಿದೆ. ಇದೀಗ ಒಂದು ತಿಂಗಳ ಬಳಿಕ ಮೃತದೇಹ ತಾಯ್ನಾಡಿಗೆ ಬಂದಿದೆ. ಆದರೆ ಸಾವಿನ ಹಿಂದಿನ ಕಾರಣದ ಬಗ್ಗೆ ಕುಟುಂಬಸ್ಥರಿಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವೆಲ್ (41) ಮೃತಪಟ್ಟವರು. ಇವರು ಒಂದೂವರೆ ವರ್ಷದಿಂದ ಇಸ್ರೇಲ್ನಲ್ಲಿ ಉದ್ಯೋಗ ಮಾಡುತ್ತಿದ್ದರು. ಆರಂಭದಲ್ಲಿ ಟೆಲ್ ಅವೀವ್ನ ಇಸ್ರೇಲಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದ ಶಡ್ರಕ್, ಬಳಿಕ ನಝರೆತ್ ಸಮೀಪದ ನೊಫ್ ಹಗಲಿಲ್ನಲ್ಲಿರುವ ಯುಸಿಟಿ ಲಿಕ್ವಿಡ್ ಸೊಲ್ಯೂಷನ್ ಕಂಪನಿಗೆ ಸೇರಿದ್ದರು.
ಅಕ್ಟೋಬರ್ 16ರಂದು ರಾತ್ರಿ 8.49ಕ್ಕೆ ಶಡ್ರಕ್ ತಮ್ಮ ಪತ್ನಿಗೆ ಕೊನೆಯದಾಗಿ ಸಂದೇಶ ಕಳುಹಿಸಿದ್ದರು. ಅದಕ್ಕೂ ಮೊದಲು ಮನೆಯವರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದರು. ಆದರೆ, ಆ ಬಳಿಕ ಕುಟುಂಬದ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಕೂಡ ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ.
ಶಡ್ರಕ್ ಅವರಿಂದ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಅಕ್ಟೋಬರ್ 21ರಂದು ಇಸ್ರೇಲ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದರು. ಅಲ್ಲದೆ, ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಸಂಸದ ಬ್ರಿಜೇಶ್ ಚೌಟ ಹಾಗೂ ಸಚಿವ ಯು.ಟಿ. ಖಾದರ್ ಅವರಿಗೂ ಮನವಿ ಸಲ್ಲಿಸಿದ್ದರು. ಶಡ್ರಕ್ ಅವರನ್ನು ಪತ್ತೆಹಚ್ಚಲು ನೆರವಾಗುವಂತೆ ಕೋರಿದ್ದರು.
ಇದರ ನಡುವೆ ಶಡ್ರಕ್ ನಾಪತ್ತೆಯಾದ ಸುಮಾರು ಒಂದು ವಾರದ ಬಳಿಕ ಅವರು ಮೃತಪಟ್ಟಿರುವ ಮಾಹಿತಿ ಕುಟುಂಬಸ್ಥರಿಗೆ ಲಭಿಸಿತ್ತು. ಆದರೆ ಮೃತದೇಹ ಭಾರತಕ್ಕೆ ತಲುಪಲು ಒಂದು ತಿಂಗಳು ಕಳೆದಿದೆ. ನವೆಂಬರ್ 24ರ ರಾತ್ರಿ ಅವರ ಮೃತದೇಹ ತಾಯ್ನಾಡಿಗೆ ರವಾನೆಯಾಗಿ ತಲುಪಿದೆ.
ಇಸ್ರೇಲ್ನಲ್ಲಿ ಉದ್ಯೋಗದಲ್ಲಿದ್ದಾಗ ಸಂಭವಿಸಿದ ಈ ನಿಗೂಢ ಸಾವು ಕುಟುಂಬಸ್ಥರನ್ನು ತೀವ್ರ ಆಘಾತಕ್ಕೆ ದೂಡಿದೆ. ಇದು ಸಹಜ ಸಾವಲ್ಲ, ಕೊಲೆ ನಡೆದಿರುವ ಸಾಧ್ಯತೆಯಿದೆ ಎಂದು ಕುಟುಂಬದವರು ಶಂಕಿಸಿದ್ದಾರೆ. ಹೀಗಾಗಿ ಇಸ್ರೇಲ್ನಲ್ಲಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು. ಶಡ್ರಕ್ ಸಾವಿನ ಹಿಂದಿನ ನೈಜ ಕಾರಣವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.



