Kannada NewsKarnataka NewsLatest

*ಸಿಎಂ ವಿಡಿಯೋ ಮಾತುಕತೆಗೂ ನಿಲ್ಲದ ಮುಷ್ಕರ*: *ಲಿಖಿತ ಆದೇಶಕ್ಕೆ ಆಶಾಗಳ ಪಟ್ಟು*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಚಳಿ, ಬಿಸಿಲು, ಗಾಳಿಯನ್ನು ಎದುರಿಸಿದ್ದ ಕಾರ್ಯಕರ್ತೆಯರಿಗೆ ಇದೀಗ ಮಳೆಯೂ ಅಡ್ಡಿಯಾಗಿದೆ. ಆದರೆ ವರುಣನ ಆರ್ಭಟಕ್ಕೂ ಜಗ್ಗದೆ ಗುಲಾಬಿ ಸೇನೆ ಹೋರಾಟ ಮುಂದುವರಿಸಿದೆ. 15 ಸಾವಿರ ರೂಪಾಯಿ ಗೌರವಧನದ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ.

ಒಂದೆಡೆ ಜೋರು ಮಳೆ, ಮತ್ತೊಂದೆಡೆ ನೀರಿನಿಂದ ತುಂಬಿದ ಪ್ರತಿಭಟನಾ ಸ್ಥಳ. ಆದರೂ ಆಶಾ ಕಾರ್ಯಕರ್ತೆಯರು ಸ್ಥಳದಿಂದ ಕದಲಿಲ್ಲ. ಮಳೆ ನೀರಿನಿಂದ ವೇದಿಕೆಯ ಪೆಂಡಲ್ ಕೂಡ ಸೋರಲಾರಂಭಿಸಿದೆ. ಹೀಗಾಗಿ ಟಾರ್ಪಲ್ ಹಿಡಿದು ಮಳೆಯಿಂದ ರಕ್ಷಣೆ ಪಡೆಯುವ ಪರಿಸ್ಥಿತಿ ಎದುರಾಗಿದೆ. ಮಕ್ಕಳನ್ನೂ ಜೊತೆಯಲ್ಲಿ ಕರೆತಂದಿರುವ ಕಾರ್ಯಕರ್ತೆಯರು ಮಳೆಯಲ್ಲೇ ಪರದಾಡುವಂತಾಗಿದೆ.

ಕಳೆದ ಎಂಟು ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ 15 ಸಾವಿರ ರೂಪಾಯಿ ಗೌರವಧನ ನೀಡುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಮುಷ್ಕರ ನಡೆಸುತ್ತಿದ್ದಾರೆ. ಆರೋಗ್ಯ ಮತ್ತಷ್ಟು ಹದಗೆಟ್ಟರೂ ಪರವಾಗಿಲ್ಲ, ಈ ಬಾರಿ ಖಾಲಿ ಕೈಯಲ್ಲಿ ಮನೆಗೆ ವಾಪಸ್ ಹೋಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆ ಬಂದರೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಈ ನಡುವೆ ಎಐಯುಟಿಯುಸಿ ಮುಖಂಡೆ ನಾಗಲಕ್ಷ್ಮಿ ಸೇರಿದಂತೆ ಕೆಲವು ಆಶಾ ಕಾರ್ಯಕರ್ತೆಯರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆಸಿದ್ದಾರೆ. ಆದರೆ ಈ ಮಾತುಕತೆಯಲ್ಲಿ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಅಧಿವೇಶನದ ಬಳಿಕ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಕಾರ್ಯಕರ್ತೆಯರು ತಿಳಿಸಿದ್ದಾರೆ.

ಆದರೆ ಗೌರವಧನವನ್ನು ಎಷ್ಟು ಹೆಚ್ಚಿಸಲಾಗುತ್ತದೆ ಮತ್ತು ಯಾವಾಗಿನಿಂದ ಜಾರಿಗೆ ತರಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಹೀಗಾಗಿ ಕೇವಲ ಮೌಖಿಕ ಭರವಸೆಗೆ ಒಪ್ಪುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರು ಹೇಳಿದ್ದಾರೆ. ಸರ್ಕಾರದಿಂದ ಲಿಖಿತ ಭರವಸೆ ಹಾಗೂ ಅಧಿಕೃತ ಆದೇಶ ಬಂದರಷ್ಟೇ ಪ್ರತಿಭಟನೆ ಹಿಂಪಡೆಯುವುದಾಗಿ ಸ್ಪಷ್ಟಪಡಿಸಿದ್ದಾರೆ.

ಇನ್ನು ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ಸೂಚಿಸಿ ನಟಿ ರಮ್ಯಾ ಫ್ರೀಡಂ ಪಾರ್ಕ್‌ಗೆ ಭೇಟಿ ನೀಡಿದ್ದಾರೆ. ಪ್ರತಿಭಟನಾಕಾರರೊಂದಿಗೆ ಮಾತನಾಡಿ ಅವರ ಬೇಡಿಕೆಗಳನ್ನು ಆಲಿಸಿದ್ದಾರೆ.

ಈ ವೇಳೆ ಮಾತನಾಡಿದ ರಮ್ಯಾ, ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕೇವಲ 7 ಸಾವಿರ ರೂಪಾಯಿ ಗೌರವಧನ ಸಿಗುತ್ತಿದೆ. ಇದು ಬಹಳ ಕಡಿಮೆ. ಅವರು ಕೇಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ. ಸರ್ಕಾರ ಆದಷ್ಟು ಬೇಗ ಬೇಡಿಕೆಗಳನ್ನು ಈಡೇರಿಸಲಿದೆ ಎಂಬ ನಂಬಿಕೆ ಇದೆ. ಈ ಸಂಬಂಧ ನಾನೂ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಎಂಟು ದಿನಗಳನ್ನು ಪೂರೈಸಿ ಒಂಬತ್ತನೇ ದಿನಕ್ಕೆ ಕಾಲಿಟ್ಟಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಇನ್ನೂ ಅಂತ್ಯ ಕಂಡುಬಂದಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಪಾನ್ ಪ್ರವಾಸ ಮುಗಿಸಿ ಇಂದು ವಾಪಸಾಗುತ್ತಿದ್ದಾರೆ. ಅವರು ಮರಳಿದ ಬಳಿಕವಾದರೂ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಲಿದೆಯೇ? ಪ್ರತಿಭಟನೆ ಅಂತ್ಯಗೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Related Articles

Back to top button