Kannada NewsKarnataka NewsLatest

ಆರ್‌ಸಿಯುಗೆ ಸರಕಾರ ಭೂಮಿ ನೀಡುವಂತೆ ಮನವಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಣಿಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಬೆಳಗಾವಿ ಸಮೀಪದ ಬಾಗೇವಾಡಿ ಮತ್ತು ಹಾಲಗಿಮರಡಿ ಗ್ರಾಮದಲ್ಲಿರುವ ಸರ್ಕಾರಿ ಭೂಮಿಯನ್ನು ನೀಡುವಂತೆ ಒತ್ತಾಯಿಸಿ ಶಿಕ್ಷಕೇತರ ನೌಕರರ ಸಂಘದ ವತಿಯಿಂದ ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಇಲ್ಲಿನ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ರ‍್ಯಾಲಿ ಕೈಗೊಂಡು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ನಡೆಸಿ ಮನವಿ ಸಲ್ಲಿಸಿದರು.

ವಿಶ್ವವಿದ್ಯಾಲಯ ಕೇಂದ್ರ ಸರ್ಕಾರವು ಗುರುತುಪಡಿಸಿ ಕಾಯ್ದಿಟ್ಟ ಅರಣ್ಯ ಪ್ರದೇಶ ಭೂತರಾಮನಹಟ್ಟಿಯಲ್ಲಿ ತನ್ನ ಕಾರ್ಯ  ನಡೆಸುತ್ತಿದೆ. ಆದರೆ ಈ ಪ್ರದೇಶ ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು ಘೋಷಿತವಾದ್ದರಿಂದ ವಿಶ್ವವಿದ್ಯಾಲಯದ ಸುಪರ್ದಿಯಲ್ಲಿಲ್ಲ.

ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ವಿವಿಧ ೧೯ ಸ್ನಾತಕೋತ್ತರ ವಿಷಯಗಳ ವಿಭಾಗಗಳು, ವಿವಿಧ ಅಧ್ಯಯನ ಪೀಠಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು ೨೦೦೦ ವಿದ್ಯಾರ್ಥಿಗಳ ಜೊತೆಗೆ ಸಂಶೋಧನಾ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರೊಂದಿಗೆ ೧೦೦ ಜನ ಬೋಧಕರು, ೨೦೦ ಜನ ಬೋಧಕೇತರ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ.

ಆದರೆ ವಿಶ್ವವಿದ್ಯಾಲಯವು ಸ್ವಂತಜಾಗ ಹೊಂದದೇ ಇರುವುದರಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಸದ್ಯವಿರುವ ಕಟ್ಟಡದಲ್ಲಿಯೇ ಎಲ್ಲ ಕೆಲಸಗಳು ನಡೆಯುತ್ತಿವೆ. ಈ ಕಟ್ಟಡವು ಸಹ ಶಿಥಿಲಗೊಳ್ಳುವ ಹಂತ ತಲುಪುತ್ತಿದೆ. ಕಾಯ್ದಿಟ್ಟ ಅರಣ್ಯ ಪ್ರದೇಶವಾದ್ದರಿಂದ ಹೊಸ ಕಟ್ಟಡಗಳ ಕಟ್ಟಲು ಮತ್ತು ನವೀಕರಣಗೊಳಿಸಲು ಅರಣ್ಯ ಇಲಾಖೆಯ ಅನುಮತಿ ಇಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿಶ್ವವಿದ್ಯಾಲಯದ ನೈಜ ಉದ್ದೇಶ ನಿರೀಕ್ಷಿತ ಮಟ್ಟದಲ್ಲಿ ವಿಧ್ಯಾರ್ಥಿಗಳನ್ನು ತಲುಪುತ್ತಿಲ್ಲ.

ನಾವು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳೊಂದಿಗೆ ಸ್ಪರ್ಧಿಸಬೇಕಾದರೆ ವಿಶ್ವವಿದ್ಯಾಲಯವು ಸ್ವಂತವಾದ ಸಾಕಷ್ಟು ಜಾಗ, ಸುಸಜ್ಜಿತ ಬೋಧನಾ ಕೊಠಡಿಗಳು, ಸಂಶೋಧನಾ ಕೇಂದ್ರಗಳು, ಕಛೇರಿಗಳು, ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಎಲ್ಲ ಸೌಲಭ್ಯಗಳುಳ್ಳ ಹಾಸ್ಟೆಲ್‌ಗಳು ಪೂರಕವಾಗಿದ್ದಾಗ ಮಾತ್ರ ವಿಶ್ವವಿದ್ಯಾಲಯವು ತನ್ನ ಮೂಲ ಉದ್ದೇಶ ಈಡೇರಿಸಿಕೊಳ್ಳುವಲ್ಲಿ ಯಶ ಕಾಣುತ್ತದೆ. ಸ್ವಂತ ಜಾಗ ಇಲ್ಲದೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದ ಯು.ಜಿ.ಸಿ.ಮಾನ್ಯತೆ ಕಳೆದುಕೊಳ್ಳುವ ಸಂಭವವಿದೆ.

ಈ ಹಿನ್ನೆಲೆಯಲ್ಲಿ  ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಬೆಳಗಾವಿ ಸಮೀಪ ಇರುವ ಹಾಗೂ ಶೈಕ್ಷಣಿಕ ವಾತಾವರಣಕ್ಕೆ ಪೂರಕವಾಗಿರುವ ಬಾಗೇವಾಡಿ ಗ್ರಾಮದಲ್ಲಿರುವ ಸರ್ವೇ ನಂ.೪೨೧, ೪೨೩, ೪೨೬, ೪೨೭, ೪೨೯ ಮತ್ತು ೪೩೧ದ ೮೮.೧೯ ಎಕರೆಗಳು ಹಾಗೂ ಹಾಲಗಿಮರಡಿ ಗ್ರಾಮದಲ್ಲಿರುವ ಸರ್ವೇ ನಂ. ೪೭,೪೮ ಮತ್ತು ೪೯ದ ವಿಸ್ತೀರ್ಣ ೩೮.೨೯ ಎಕರೆಗಳ ಸರ್ಕಾರಿ ಭೂಮಿಯನ್ನು ನೀಡಬೇಕು.

ವಿಶ್ವವಿದ್ಯಾಲಯದ ಅಧೀನಕ್ಕೊಳಪಡುವ ಮೂರು ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳ ಶಿಕ್ಷಕರು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಬಹುದಿನಗಳ ಕನಸು ಸಾಕಾರಗೊಳ್ಳಬೇಕಿದೆ. ಆದ್ದರಿಂದ  ರಾಣಿಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಬೆಳಗಾವಿ ಸಮೀಪ ಇರುವ ಬಾಗೇವಾಡಿ ಮತ್ತು ಹಾಲಗಿಮರಡಿ ಗ್ರಾಮದಲ್ಲಿರುವ ೧೨೭.೦೭ ಎಕರೆ ಸರ್ಕಾರಿ ಜಮೀನನ್ನು ನೀಡಲು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಈ ಸಂದರ್ಭದಲ್ಲಿ ಶಿಕ್ಷಕೇತರ ನೌಕರರ ಸಂಘದ ಅಧ್ಯಕ್ಷ ರಾಮು ಹಂಚಿನಾಳ, ಕಾರ್ಯದರ್ಶಿ ಹಣಮಂತ ಕುಲಗೋಡ, ಸಂಘದ ಸದಸ್ಯರು ಮುರಗೇಶ ಎಚ್ ಎಮ್, ಎಸ್‌ಸಿ/ಎಸ್‌ಟಿ ಸಂಘದ ಅಧ್ಯಕ್ಷೆ ಕೀರ್ತಿವರ್ಮಾ ಎಮ್. ಕಾಂಬಳೆ, ಮಾರುತಿ ಕರಿಯವರ, ಹನುಮಂತ ಕುಲಗೋಡ, ರಾಮು ಹಂಚಿನಾಳ, ಸೋಮಣ್ಣಗೌಡ ಪಾಟೀಲ, ಮಹೇಶ ವಾಲಿ, ರವಿ ಒಂಟಗೂಡಿ, ಜಡೇಶಕುಮಾರ ಕೆರವಡ್ಡಿ, ಮಾರುತಿ ಕರೆಣ್ಣವರ, ಶ್ರೀನಿವಾಸ ಹಡಾಡಿ, ತುಷಾರ ಪಾಟೀಲ, ಪರಶುರಾಮ ಪಾಟೀಲ ಹಾಗೂ ಎಲ್ಲ ಬೋಧಕೇತರಸದಸ್ಯರು ಇತರರು ಇದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button