Karnataka NewsLatestPolitics

*ಪಿಎಸ್‌ಐ ಹಗರಣದ ವೇಳೆ ಸಿಐಡಿ ನೋಟಿಸ್ ಕೊಟ್ಟಾಗ ಪ್ರಿಯಾಂಕ್ ಖರ್ಗೆ ಏಕೆ ಉತ್ತರ ನೀಡಲಿಲ್ಲ?*: *HDK ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ: ನಾನು ಹಿಟ್ ಅಂಡ್ ರನ್ ಮಾಡಿಲ್ಲ. ಪ್ರತಿ ಬಾರಿಯೂ ದಾಖಲೆ ಇಟ್ಟು ಮಾತನಾಡಿದ್ದೇನೆ. 543 ಜನ ಪಿಎಸ್‌ಐ ಅಭ್ಯರ್ಥಿಗಳ ನೇಮಕ ಅಕ್ರಮದ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ದಾಖಲೆಗಳನ್ನು ಎಲ್ಲಿ ಕೊಟ್ಟಿದ್ದರು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಪಿಎಸ್‌ಐ ಹಗರಣದ ಸಂದರ್ಭದಲ್ಲಿ ನನ್ನ ಬಳಿ ಎಲ್ಲಾ ದಾಖಲೆ, ಆಡಿಯೋ, ವಿಡಿಯೋ ಇದೆ ಎಂದು ಹೇಳಿದ್ದ ಪ್ರಿಯಾಂಕ್ ಖರ್ಗೆ ಅವರು, ನನಗೇಕೆ ನೋಟಿಸ್ ಕೊಟ್ಟಿರಿ ಎಂದು ಸಿಐಡಿ ಮುಖ್ಯಸ್ಥರಿಗೆ 2022 ಏಪ್ರಿಲ್ 28ರಂದು ಪತ್ರ ಬರೆದಿದ್ದರು. ಮೂರು ಪುಟಗಳ ಪತ್ರದಲ್ಲಿ ಪ್ರಿಯಾಂಕ್ ಖರ್ಗೆ ಏನೇನು ಬರೆದಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಇಷ್ಟೆಲ್ಲ ಇತಿಹಾಸ ಇರುವ ಪ್ರಿಯಾಂಕ್ ಖರ್ಗೆ ಅವರು, ಆಗ ಸಿಐಡಿ ನೋಟಿಸ್ ಗೆ ಯಾಕೆ ಉತ್ತರ ಕೊಡಲಿಲ್ಲ. ಆಗ ಸಂವಿಧಾನ ಎಲ್ಲಿ ಹೋಗಿತ್ತು. ನೋಟಿಸ್ ಕೊಡಲಿ, ನೋಟಿಸ್ ಕೊಟ್ಟು ಏನ್ ಮಾಡ್ತಾರೆ. ಸರ್ಕಾರ ಏನ್ ಮಾಡ್ತಿದೆ. ನಾನು ಹೇಳ್ತಿದ್ದರೋದು ಪಬ್ಲಿಕ್ ಡೊಮೈನ್ ನಲ್ಲಿ ಇದೆ ಎಂದು ಹೇಳಿದ್ದರು ಅವರು. ಇಂತಹ ವ್ಯಕ್ತಿ ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸಿಐಡಿ ಈ ಹಿಂದೆ ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ಹಾಗೂ ಅದಕ್ಕೆ ಖರ್ಗೆ ನೀಡಿರುವ ಉತ್ತರವನ್ನು ಸಚಿವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

Related Articles

Back to top button