Kannada NewsKarnataka NewsLatest

*BREAKING: ಸಿಎಂ ಡಿ.ಕೆ.ಶಿವಕುಮಾರ್ ನಿವಾಸ, ವಿಧಾನಸೌಧಕ್ಕೆ ಬಾಂಬ್ ಬೆದರಿಕೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಬಾಂಬ್ ಬೆದರಿಕೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸ ಹಾಗೂ ವಿಧಾನಸೌಧಕ್ಕೂ ಬಾಅಂಬ್ ಬೆದರಿಕೆ ಕರೆ ಬಂದಿದೆ.

ಸಿಎಂ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರ ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ವಿಶೇಷವೆಂದರೆ, ಈ ಬೆದರಿಕೆ ಕರೆ ನೇರವಾಗಿ ಪೊಲೀಸರಿಗೆ ಬಂದಿಲ್ಲ. ಆಟೋ ಚಾಲಕನ ಮೊಬೈಲ್ ಮೂಲಕ ಪೊಲೀಸರಿಗೆ ಅನಾಮಿಕ ವ್ಯಕ್ತಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಭಗವಂತರಾಯನ್ ಎಂಬವರು ನಮ್ಮ ಯಾತ್ರಿ ಆ್ಯಪ್ ಮೂಲಕ ಆಟೋ ಚಾಲನೆ ಮಾಡುತ್ತಿದ್ದರು. ಅಂದು ಕಾರ್ತಿಕ್ ಎಂಬ ವ್ಯಕ್ತಿ ಸದಾಶಿವನಗರದಿಂದ ಆರ್.ಆರ್. ನಗರಕ್ಕೆ ತೆರಳಲು ಆಟೋ ಬುಕ್ ಮಾಡಿದ್ದ. ಆಟೋ ಬುಕ್ ಮಾಡಿದ ವ್ಯಕ್ತಿ ಕಳುಹಿಸಿದ್ದ ಪಿಕಪ್ ಲೊಕೇಶನ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದ ಸಮೀಪ ತೋರಿಸಿತ್ತು.

ಹೀಗಾಗಿ ಆಟೋ ಚಾಲಕ ಭಗವಂತರಾಯನ್ ಅವರು ಆ ಸ್ಥಳಕ್ಕೆ ತೆರಳಿ, ಆಟೋ ಬುಕ್ ಮಾಡಿದ್ದ ವ್ಯಕ್ತಿಗೆ ಕರೆ ಮಾಡಿದ್ದಾರೆ. ಈ ವೇಳೆ ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ, ತಾನು ಸಿಎಂ ನಿವಾಸದಲ್ಲಿರುವುದಾಗಿ ಹೇಳಿದ್ದಾನೆ. ಅಲ್ಲದೆ, ನಿವಾಸದ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸರು ನಿಂತಿದ್ದಾರೆ. ಅವರಿಗೆ ಮೊಬೈಲ್ ಕೊಡುವಂತೆ ಸೂಚಿಸಿದ್ದಾನೆ. ನವೆಂಬರ್ 7ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಪರಿಚಿತ ವ್ಯಕ್ತಿಯ ಸೂಚನೆಯಂತೆ ಆಟೋ ಚಾಲಕ ಅಲ್ಲಿದ್ದ ಪೊಲೀಸರಿಗೆ ಮೊಬೈಲ್ ನೀಡಿದ್ದಾರೆ. ಪೊಲೀಸರು ಕರೆ ಸ್ವೀಕರಿಸುತ್ತಿದ್ದಂತೆ ಮಾತನಾಡಿದ ಅಪರಿಚಿತ ವ್ಯಕ್ತಿ, ಡಿ.ಕೆ. ಶಿವಕುಮಾರ್ ಅವರ ನಿವಾಸ ಹಾಗೂ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ತಕ್ಷಣವೇ ಕರೆ ಕಡಿತಗೊಳಿಸಿದ್ದಾನೆ.

ಇದರಿಂದ ಆತಂಕಗೊಂಡ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಮೊದಲು ಪಿಕಪ್ ಸ್ಥಳಕ್ಕೆ ಬಂದಿದ್ದ ಆಟೋವನ್ನು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮುಖ್ಯಮಂತ್ರಿಗಳ ನಿವಾಸ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಪಾಸಣೆ ಕೈಗೊಂಡಿದ್ದಾರೆ.

ಪೊಲೀಸರ ಪರಿಶೀಲನೆಯ ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂಬುದು ತಿಳಿದುಬಂದಿದೆ. ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಆಟೋ ಚಾಲಕ ಭಗವಂತರಾಯನ್ ನೀಡಿದ ದೂರಿನ ಮೇರೆಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Related Articles

Back to top button