Kannada NewsKarnataka NewsLatest

*ಸೋಲಾರ್ ಕಂಪನಿಗೆ ಜಮೀನು ಬಿಟ್ಟು ಕೊಡದ ರೈತರ ಮೇಲೆ FIR ದಾಖಲು*: *ಪೊಲೀಸರ ಕ್ರಮಕ್ಕೆ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಸೋಲಾರ್ ಕಂಪನಿಗೆ ಜಮೀನು ಕೊಟ್ಟಿಲ್ಲ ಎಂಬ ಕಾರಣಕ್ಕೆ ರೈತರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದಲ್ಲದೇ ರೈತರ ಮೇಲೆಯೇ ಎಫ್ ಐ ಆರ್ ದಾಖಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೆಲಸಕ್ಕೆ ಅಡ್ಡಿ ಸೇರಿದಂತೆ ಅವಾಚ್ಯ ಶಬ್ದಗಳಿಂದ ನಿಂದನೆ‌ ಮಾಡಿದ್ದಾರೆಂದು ಆರೋಪಿಸಿ ರೈತರ ಮೇಲೆ ಎಫ್​​ಐಆರ್​​ ದಾಖಲಿಸಿರುವ ಘಟನೆ ನಡೆದಿದೆ. ಪೊಲೀಸರ ದರ್ಪ, ದಬ್ಬಾಳಿಕೆಗೆ ರೈತರು ಸಿಡಿದೆದ್ದಿದ್ದಾರೆ.

ಇಂತದ್ದೊಂದು ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ ನಡೆದಿದೆ. ಬೇವೂರು ಠಾಣೆಯಲ್ಲಿ ರೈತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಖಾಸಗಿ ಸೋಲಾರ್ ಕಂಪನಿ ಪರ ಪೊಲೀಸರೇ ಮಧ್ಯಸ್ಥಿಕೆ ವಹಿಸಿದ್ದಾರಾ? ಎಂಬ ಪ್ರಶ್ನೆ ಮೂಡಿದೆ.

ಸೋಲಾರ್ ಕಂಪನಿಗೆ ಜಮೀನು ನೀಡುವ ಸಂಬಂಧ ಭೂಸ್ವಾಧೀನ ಮಾಡಿಕೊಳ್ಳಬೇಕಾದರೆ ಜಿಲ್ಲಾಧಿಕಾರಿಗಳು ನೋಟಿಸ್ ಕೊಡಬೇಕು. ಆದರೆ ಇಲ್ಲಿ ಪಿಎಸ್​ಐ ಅವರೇ ಬೆದರಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಕನೂರಿನ ಮಂಗಳೂರು ಗ್ರಾಮದಲ್ಲಿ ರೈತರ ಒಪ್ಪಿಗೆ ಪಡೆಯದೇ ಟೊರೆಂಟ್‌ ಸೋಲಾರ್ ಪ್ರೈವೇಟ್ ಲಿಮಿಟೆಡ್ ಕಂಪನಿ ಕಂಬಗಳನ್ನು ಹಾಕಲು ಮುಂದಾಗಿತ್ತು. ಹೀಗಾಗಿ ಕಂಪನಿ ವಿರುದ್ದ ಆಕ್ರೋಶ ಹೊರಹಾಕಿದ್ದ ರೈತರು, ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ನಾವು ಜಮೀನು ಕೊಡೋದಿಲ್ಲ, ಜಿಲ್ಲಾಧಿಕಾರಿಗಳೇ‌ ನೋಟಿಸ್ ನೀಡಲಿ ಎಂದು ಆಗ್ರಹಿಸಿದ್ದರು. ಆದರೆ ಇದೀಗ ಪೊಲೀಸರ ಕುಮ್ಮಕ್ಕಿನಿಂದ ಎಂಟು ಜನ ರೈತರ ವಿರುದ್ಧ ಎಫ್​​ಐಆರ್​ ದಾಖಲಿಸಿ ಹೆದರಿಸುವ ಕೆಲಸ ನಡೆಯುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಪೊಲೀಸರು ಮತ್ತು ನಮ್ಮ ಅಧಿಕಾರಿಗಳ ತಪ್ಪು ಕಂಡುಬಂದಿದೆ. ಕಂಪನಿಯವರು ದಬ್ಬಾಳಿಕೆ ಮಾಡ್ತಾ ಇರೋದು ನನ್ನ ಗಮನಕ್ಕೆ ಇದೆ ಎಂದಿದ್ದಾರೆ. ಈ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

Related Articles

Back to top button