Latest

*ಆಶಾ ಕಾರ್ಯಕರ್ತೆಯರ ಜೊತೆ ಸಿಎಂ ಸಂಧಾನ ಸಭೆ ವಿಫಲ*: *ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಗುಲಾಬಿ ಸೇನೆ*

ಪ್ರಗತಿವಾಹಿನಿ ಸುದ್ದಿ: ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಸದ್ಯಕ್ಕೆ ಅಂತ್ಯಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ನಡೆದ ಸಂಧಾನ ಸಭೆಯಲ್ಲೂ ಒಮ್ಮತ ಮೂಡಿಲ್ಲ. 15 ಸಾವಿರ ರೂಪಾಯಿ ಮಾಸಿಕ ಗೌರವಧನ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿರುವ ಕಾರ್ಯಕರ್ತೆಯರಿಗೆ ಸಿಎಂ ಭರವಸೆ ನೀಡಿದ್ದಾರೆ. ಆದರೆ, ತಕ್ಷಣದ ನಿರ್ಧಾರಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಪ್ರತಿಭಟನೆ ಮುಂದುವರಿಸಲು ಕಾರ್ಯಕರ್ತೆಯರು ನಿರ್ಧರಿಸಿದ್ದಾರೆ.

ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪ್ರತಿನಿಧಿಗಳೊಂದಿಗೆ ಸಿಎಂ ಸಭೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಸುಮಾರು 41 ಸಾವಿರ ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರಕ್ಕೆ ನಂಬಿಕೆ ಮತ್ತು ಸಹಾನುಭೂತಿ ಇದೆ. ಅವರು ಜನರ ಸೇವೆ ಮಾಡುತ್ತಿದ್ದಾರೆ. ಆದರೆ, ಅವರ ಬೇಡಿಕೆಗಳ ಬಗ್ಗೆ ಒಂದೇ ದಿನದಲ್ಲಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.

ಸಂಬಂಧಪಟ್ಟ ಸಚಿವರು, ಸಚಿವ ಸಂಪುಟ ಸಭೆ ಹಾಗೂ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಎಸ್‌ಐಆರ್ ಹಾಗೂ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಗಳಲ್ಲಿ ಕೆಲಸ ಮಾಡಿದ್ದರೂ ಯಾವುದೇ ಗೌರವಧನ ಸಿಕ್ಕಿಲ್ಲ ಎಂದು ಆಶಾ ಕಾರ್ಯಕರ್ತೆಯರು ಸಭೆಯಲ್ಲಿ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸಮೀಕ್ಷಾ ಕಾರ್ಯಗಳಿಗೆ ಬಳಸಿಕೊಂಡಾಗ ಗೌರವಧನವನ್ನೂ ನೀಡಬೇಕು. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಜೊತೆಗೆ ಸರ್ಕಾರದೊಂದಿಗೆ ಸಹಕರಿಸಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು.

ಆಶಾ ಕಾರ್ಯಕರ್ತೆಯರಿಗಾಗಿ ಸರ್ಕಾರ ಹಲವು ಸೌಲಭ್ಯಗಳನ್ನು ನೀಡಿದೆ ಎಂದು ವಿವರಿಸಿದ ಸಿಎಂ, ಗೃಹಲಕ್ಷ್ಮಿ ಯೋಜನೆಯಡಿ ನಿಮ್ಮನ್ನು ಸೇರಿಸಬಾರದು ಎಂಬ ಅಭಿಪ್ರಾಯಗಳಿದ್ದರೂ ಅದನ್ನು ಒಪ್ಪದೆ ಯೋಜನೆಯ ಪ್ರಯೋಜನ ನೀಡಲಾಗಿದೆ. ಉಚಿತ ಬಸ್ ಪ್ರಯಾಣ ಮತ್ತು ವಿದ್ಯುತ್ ಸೌಲಭ್ಯಗಳನ್ನೂ ಒದಗಿಸಲಾಗಿದೆ. ನನ್ನ ಮೇಲೆ ವಿಶ್ವಾಸವಿರಲಿ, ನಿಮಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಪಿಂಚಣಿ ಯೋಜನೆಯನ್ನೂ ನಮ್ಮ ಸರ್ಕಾರ ಜಾರಿಗೆ ತಂದಿದೆ. ಕೇಂದ್ರ ಸರ್ಕಾರವೂ ತನ್ನ ಪಾಲಿನ ಹಣವನ್ನು ಹೆಚ್ಚಿಸಬೇಕು ಎಂದು ಸಿಎಂ ತಿಳಿಸಿದರು.

ಆಶಾ ಕಾರ್ಯಕರ್ತೆಯರಿಗೆ ಆರಂಭದಲ್ಲಿ ₹200 ನೀಡಲಾಗುತ್ತಿತ್ತು. ಪ್ರಸ್ತುತ ಕೇಂದ್ರ ಸರ್ಕಾರ ₹2,000 ನೀಡುತ್ತಿದ್ದರೆ, ರಾಜ್ಯ ಸರ್ಕಾರ ₹5,000 ನೀಡುತ್ತಿದೆ. ಇದರ ಜೊತೆಗೆ ರಾಜ್ಯದಿಂದ ₹1,000 ಪ್ರೋತ್ಸಾಹಧನವನ್ನೂ ನೀಡಲಾಗುತ್ತಿದೆ. ಕೆಲಸದ ಆಧಾರದ ಮೇಲೆ ಇತರ ಪ್ರೋತ್ಸಾಹಧನ ಸೇರಿ ಒಟ್ಟಾರೆ ಸುಮಾರು ₹8,000 ದೊರೆಯುತ್ತಿದೆ ಎಂದು ವಿವರಿಸಿದರು.

ಆದರೆ, ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆ ಮಾಸಿಕ ಗೌರವಧನವನ್ನು ₹15,000ಕ್ಕೆ ಹೆಚ್ಚಿಸುವುದಾಗಿದೆ. ಈ ಬೇಡಿಕೆಯ ವಾಸ್ತವಿಕತೆ ಮತ್ತು ಸರ್ಕಾರದ ಆರ್ಥಿಕ ಇತಿಮಿತಿಗಳನ್ನು ಅವರಿಗೆ ವಿವರಿಸಿದ್ದೇನೆ. ಆಶಾ ಕಾರ್ಯಕರ್ತೆಯರ ಬೇಡಿಕೆ ಮಾತ್ರವಲ್ಲದೆ ವಿವಿಧ ವರ್ಗಗಳಿಂದಲೂ ಹಲವು ಬೇಡಿಕೆಗಳಿವೆ. ಎಲ್ಲವನ್ನೂ ಪರಿಶೀಲಿಸಿ ಸರ್ಕಾರದಿಂದ ಸಾಧ್ಯವಾದ ನೆರವು ನೀಡಲಾಗುವುದು ಎಂದು ಸಿಎಂ ಹೇಳಿದರು.

ಕಾರ್ಯಕರ್ತೆಯರು ಒಟ್ಟು ಎಂಟರಿಂದ ಒಂಬತ್ತು ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಎಲ್ಲದರ ಬಗ್ಗೆಯೂ ಚರ್ಚೆ ನಡೆಸಲಾಗುವುದು. ಗೃಹ ಸಚಿವರೊಂದಿಗೂ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಆದರೆ, ಸಿಎಂ ನೀಡಿದ ಭರವಸೆಗೆ ಆಶಾ ಕಾರ್ಯಕರ್ತೆಯರು ಒಪ್ಪಿಗೆ ಸೂಚಿಸಿಲ್ಲ. ಮೂರು ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ಹಗಲು-ರಾತ್ರಿ ಚಳಿಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿರುವ ಅವರು, ಮಾಸಿಕ ₹15 ಸಾವಿರ ಗೌರವಧನ, ನಿವೃತ್ತಿಯ ಬಳಿಕ ₹5 ಲಕ್ಷ ಇಡಿಗಂಟು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಿದ್ದಾರೆ.

ಸರ್ಕಾರದಿಂದ ಸ್ಪಷ್ಟ ನಿರ್ಧಾರ ಮತ್ತು ಲಿಖಿತ ಭರವಸೆ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂಬ ನಿಲುವಿಗೆ ಕಾರ್ಯಕರ್ತೆಯರು ಬದ್ಧರಾಗಿದ್ದಾರೆ. ಹೀಗಾಗಿ ಸಿಎಂ ಜೊತೆಗಿನ ಸಂಧಾನ ಸಭೆ ವಿಫಲವಾಗಿದ್ದು, ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮುಂದುವರೆಸಿದ್ದಾರೆ.

Related Articles

Back to top button