*ಶಿಕ್ಷಕರು, ಉಪನ್ಯಾಸಕರಿಗೆ ಗುಡ್ ನ್ಯೂಸ್*: *ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವಿಗೆ ಅರ್ಜಿ ಸಲ್ಲಿಕೆಗೆ ದಿನಾಂಕ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಆರ್ಥಿಕ ನೆರವು ನೀಡಲು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮುಂದಾಗಿದೆ.
2026-27ನೇ ಸಾಲಿನ ಶೈಕ್ಷಣಿಕ ಧನಸಹಾಯಕ್ಕಾಗಿ ಅರ್ಹ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರ ಮಕ್ಕಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನದ ವತಿಯಿಂದ ಈ ಧನಸಹಾಯ ಯೋಜನೆ ಜಾರಿಗೊಳಿಸಲಾಗುತ್ತಿದ್ದು, 2026ರ ಡಿಸೆಂಬರ್ 1ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ. ನಿಗದಿತ ಅವಧಿಯ ನಂತರ ಸಲ್ಲಿಕೆಯಾಗುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
- ಸರ್ಕಾರಿ ಶಾಲೆಗಳ ಶಿಕ್ಷಕರ ಮಕ್ಕಳು.
- ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಮಕ್ಕಳು.
- ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ಮಕ್ಕಳು.
- ಸೇವೆಯಲ್ಲಿರುವ ಮತ್ತು ನಿವೃತ್ತ ಶಿಕ್ಷಕರು, ಉಪನ್ಯಾಸಕರ ಮಕ್ಕಳು.
ವಿದ್ಯಾರ್ಥಿಗಳು ಪ್ರಸಕ್ತ 2026-27ನೇ ಸಾಲಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರಬೇಕು. ಅರ್ಜಿಯಲ್ಲಿ ಸೂಚಿಸಿರುವ ಕೋರ್ಸ್ ಗಳಿಗೆ ಮಾತ್ರ ಧನಸಹಾಯ ನೀಡಲಾಗುತ್ತದೆ. ಆದರೆ CA ಮತ್ತು PhD ಕೋರ್ಸ್ಗಳಿಗೆ ಧನಸಹಾಯ ಲಭ್ಯವಿರುವುದಿಲ್ಲ.
ಅರ್ಜಿ ಸಲ್ಲಿಸಲು ಪ್ರಮುಖ ಷರತ್ತುಗಳು
- ಒಂದು ಕುಟುಂಬಕ್ಕೆ ಒಬ್ಬ ವಿದ್ಯಾರ್ಥಿಗೆ ಮಾತ್ರ ಧನಸಹಾಯ ನೀಡಲಾಗುತ್ತದೆ.
- ವಿದ್ಯಾರ್ಥಿ ಅಥವಾ ತಾಯಿ/ತಂದೆಯಾದ ಶಿಕ್ಷಕರು ಅಥವಾ ಉಪನ್ಯಾಸಕರಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬೇಕು.
- ಸೇವೆಯಲ್ಲಿರುವ ಶಿಕ್ಷಕರು ಡಿಡಿಒ ಅಥವಾ ನಿಯಂತ್ರಣಾಧಿಕಾರಿಗಳ ಸಹಿ ಪಡೆಯಬೇಕು.
- ನಿವೃತ್ತ ಶಿಕ್ಷಕರು ಗೆಜೆಟೆಡ್ ಅಧಿಕಾರಿಗಳಿಂದ ಅರ್ಜಿಯನ್ನು ದೃಢೀಕರಿಸಬೇಕು.
- ನಿವೃತ್ತ ಶಿಕ್ಷಕರು ಮಹಾಲೇಖಪಾಲರಿಂದ ದೃಢೀಕರಿಸಿದ ಪಿಂಚಣಿ ಮಂಜೂರಾತಿ ಆದೇಶದ ಪ್ರತಿ ಸಲ್ಲಿಸಬೇಕು.
- ಅರ್ಜಿಯಲ್ಲಿ ಶಿಕ್ಷಕರ ಸಹಿ ಕಡ್ಡಾಯ.
- ಬೋಧಕೇತರ ಸಿಬ್ಬಂದಿಗೆ ಈ ಧನಸಹಾಯ ಸೌಲಭ್ಯ ಇರುವುದಿಲ್ಲ.
- ವಿದ್ಯಾರ್ಥಿಯ ಪ್ರಸಕ್ತ ಸಾಲಿನ ವ್ಯಾಸಂಗ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ.
ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಕೆ
ಶಿಕ್ಷಕರ ಕಲ್ಯಾಣ ನಿಧಿಯ ಸೌಲಭ್ಯಗಳನ್ನು ಸಂಪೂರ್ಣವಾಗಿ ಆನ್ಲೈನ್ ಮೂಲಕ ಒದಗಿಸಲಾಗುತ್ತಿದೆ. ಹೀಗಾಗಿ ಭೌತಿಕ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಅಜೀವ ಸದಸ್ಯತ್ವದ ಹೊಸ ಕಾರ್ಡ್ ಸಂಖ್ಯೆ ಪಡೆದಿರುವವರು ಹಾಗೂ ಹಳೆಯ ಅಜೀವ ಸದಸ್ಯತ್ವದ ಕಾರ್ಡ್ಗಳನ್ನು ಆನ್ಲೈನ್ನಲ್ಲಿ ನವೀಕರಿಸಿ ಹೊಸ ಸದಸ್ಯತ್ವ ಸಂಖ್ಯೆ ಪಡೆದಿರುವ ಶಿಕ್ಷಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್:
kstbfonline.karnataka.gov.in
ಅಥವಾ TBF/SWF Online Services ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಗತ್ಯ ದಾಖಲೆಗಳು
- ಆನ್ ಲೈನ್ ಅಜೀವ ಸದಸ್ಯತ್ವ ಸಂಖ್ಯೆ.
- ವಿದ್ಯಾರ್ಥಿಯ ಪ್ರಸಕ್ತ ಸಾಲಿನ ವ್ಯಾಸಂಗ ಪ್ರಮಾಣಪತ್ರ.
- ಡಿಡಿಒ/ನಿಯಂತ್ರಣಾಧಿಕಾರಿಗಳ ಸಹಿ.
- ನಿವೃತ್ತ ಶಿಕ್ಷಕರಿಗೆ ಪಿಂಚಣಿ ಮಂಜೂರಾತಿ ಆದೇಶದ ಪ್ರತಿ.
- ಪ್ರಸ್ತುತ ಚಾಲ್ತಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ಖಾತೆ ಸಂಖ್ಯೆ.
- ಬ್ಯಾಂಕ್ IFSC ಕೋಡ್.
ರಾಷ್ಟ್ರೀಕೃತ ಬ್ಯಾಂಕ್ಗಳ ವಿಲೀನದ ಹಿನ್ನೆಲೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ.
ಅರ್ಜಿಗೆ ಪ್ರಮುಖ ದಿನಾಂಕಗಳು
ಅರ್ಜಿ ಆರಂಭ
01-12-2026
ಅರ್ಜಿ ಸಲ್ಲಿಸಲು ಕೊನೆಯ ದಿನ
31-12-2026
ಅರ್ಜಿ ಸಲ್ಲಿಕೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ಮಾತ್ರ.
ಈ ಕುರಿತು ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸುತ್ತೋಲೆಯನ್ನು ಪ್ರಕಟಣಾ ಫಲಕಗಳಲ್ಲಿ ಪ್ರಕಟಿಸಿ ಶಿಕ್ಷಕರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಶಿಕ್ಷಕರು ಅಗತ್ಯ ದಾಖಲೆಗಳನ್ನು ಒದಗಿಸಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.



