Kannada NewsKarnataka NewsLatestPolitics

*ಹಳೆಯ ವಿದ್ಯಾರ್ಥಿಗಳಿಗೆ ಮಹತ್ವದ ಸೂಚನೆ ನೀಡಿದ ಸಿಎಂ*

ಪ್ರಗತಿವಾಹಿನಿ ಸುದ್ದಿ: “ಆದಿ ಚುಂಚನಗಿರಿ ಮಠ ನೀಡುತ್ತಿರುವ ಶಿಕ್ಷಣ, ಆರೋಗ್ಯ ಸೇವೆ ಉತ್ತಮ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತಿದೆ. ಬಿಜಿಎಸ್ ಸಂಸ್ಥೆ ಇಂದು ಹುಟ್ಟಿ ನಾಳೆ ಸಾಯುವ ಹುಲ್ಲುಕಡ್ಡಿಯಲ್ಲ. ಇದು ನೂರಾರು ವರ್ಷ ಬಾಳುವ ಆಲದ ಮರ ಇದ್ದಂತೆ. ಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಯವರು ನೆಟ್ಟ ಈ ಆಲದ ಮರದ ನೆರಳು ಇಂದು ದೇಶ-ವಿದೇಶಗಳಲ್ಲೂ ಹರಡಿಕೊಂಡಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಕೆಂಗೇರಿಯ ಬಿಜಿಎಸ್ ಮೈದಾನದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ 18ನೇ ಬಿಜಿಎಸ್ ಫೌಂಡೇಷನ್ ಡೇ ಮತ್ತು ಬಿಜಿಎಸ್ ಉತ್ಸವ-2026 ಅನ್ನು ಉದ್ಘಾಟಿಸಿ ಮಾತನಾಡಿದರು.

“ಮಂಡ್ಯ ಜಿಲ್ಲೆಯ ಒಂದು ಕುಗ್ರಾಮದಲ್ಲಿದ್ದ ಚುಂಚನಗಿರಿ ಮಠ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಬಾಲಗಂಗಾಧರನಾಥ ಸ್ವಾಮೀಜಿಯವರ ದೂರದೃಷ್ಟಿ, ಪರಿಶ್ರಮ ಮತ್ತು ಸಮಾಜಮುಖಿ ಚಿಂತನೆಗಳೇ ಕಾರಣ. ಶ್ರೀಗಳು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿರಬಹುದು. ಆದರೆ ಅವರು ಹಾಕಿಕೊಟ್ಟ ಮಾರ್ಗದರ್ಶನ ಮತ್ತು ಆಶೀರ್ವಾದದಿಂದ ಸುಮಾರು 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಇಂದು ದೇಶ-ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವರ ಆಶಯದಂತೆ ಮಠದ ಸೇವಾ ಕಾರ್ಯಗಳು ಮುಂದುವರಿಯುತ್ತಿವೆ” ಎಂದು ಹೇಳಿದರು.

“ಹಿರಿಯ ಸ್ವಾಮೀಜಿಯವರ ಹಾದಿಯಲ್ಲೇ ನಿರ್ಮಲಾನಂದನಾಥ ಸ್ವಾಮೀಜಿಯವರು ಮುನ್ನಡೆಯುತ್ತಿದ್ದಾರೆ. ಮಠದ ಸೇವಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಜಾತಿ, ಧರ್ಮದ ಆಧಾರದಲ್ಲಿ ಯಾವುದೇ ತಾರತಮ್ಯ ಮಾಡದೆ ಸಮಾಜದ ಎಲ್ಲಾ ವರ್ಗಗಳಿಗೂ ಸೇವೆ ಸಲ್ಲಿಸುತ್ತಿರುವುದು ವಿಶೇಷ. ಹಿಂದುಳಿದ ವರ್ಗಗಳೂ ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಬೆಳೆಯಬೇಕು ಎಂಬ ಮಾರ್ಗದರ್ಶನವನ್ನು ಬಾಲಗಂಗಾಧರನಾಥ ಸ್ವಾಮೀಜಿಯವರು ನೀಡಿದ್ದರು. ಅವರ ಈ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ” ಎಂದರು.

ಜಾತಿ, ಧರ್ಮದ ಭೇದವಿಲ್ಲದೆ ಎಲ್ಲ ವರ್ಗದ ಜನರಿಗೂ ಸೇವೆ

“ನಮ್ಮ ಗುರುಗಳಾದ ಅಜ್ಜಯ್ಯನವರು ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಸಂದೇಶದೊಂದಿಗೆ ಮಾರ್ಗದರ್ಶನ ನೀಡಿದ್ದರು. ಅದೇ ಆಶಯವನ್ನು ಬಾಲಗಂಗಾಧರನಾಥ ಸ್ವಾಮೀಜಿಯವರು ‘ಮಾನವ ಸೇವೆಯಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಚಿಂತನೆಯ ಮೂಲಕ ಮುಂದುವರಿಸಿದರು. ಗುರುವೇ ಅರಿವಿನ ಜ್ಯೋತಿ, ಗುರುವೇ ಅಂತರಂಗ ಮತ್ತು ಬಹಿರಂಗ. ಗುರುವೇ ಒಂದು ದೊಡ್ಡ ತತ್ವ, ತಪಸ್ಸು ಹಾಗೂ ಮಾರ್ಗದರ್ಶನ” ಎಂದು ಬಣ್ಣಿಸಿದರು.

“ಬಾಲಗಂಗಾಧರನಾಥ ಸ್ವಾಮೀಜಿಯವರ 50ನೇ ವರ್ಷದ ಜನ್ಮದಿನದ ಸಂದರ್ಭದಲ್ಲಿ ಕುಂಬಳಗೂಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ, ಅಂದು ಸಾಯಿಬಾಬಾ ಅವರು ಹಣ ಮತ್ತು ರಕ್ತ ಎರಡೂ ಒಂದೇ ಕಡೆ ನಿಲ್ಲಬಾರದು, ನಿರಂತರವಾಗಿ ಚಲಾವಣೆಯಲ್ಲಿರಬೇಕು ಎಂದಿದ್ದರು. ಹಣ ಸಮಾಜದ ವಿವಿಧ ವರ್ಗಗಳ ನಡುವೆ ಹರಿದಾಡಬೇಕು. ಅದೇ ರೀತಿ ದೇಹದಲ್ಲಿ ರಕ್ತ ನಿರಂತರವಾಗಿ ಸಂಚರಿಸಬೇಕು. ಆಗ ರೋಗಗಳು ಬರೋದಿಲ್ಲ” ಎಂದರು.

“ಬಾಲಗಂಗಾಧರನಾಥ ಸ್ವಾಮೀಜಿಯವರ ದೂರದೃಷ್ಟಿಯಿಂದ ಆರಂಭವಾದ ಶಿಕ್ಷಣ ಸೇವೆ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಮಠದ ಶಿಕ್ಷಣ ಸಂಸ್ಥೆಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ” ಎಂದು ಹೇಳಿದರು.

“ಒಂದು ಗುರುಪೀಠದ ಅಡಿಯಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ವೈದ್ಯರು, ಎಂಜಿನಿಯರ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿಭಾವಂತರನ್ನು ರೂಪಿಸುತ್ತಿವೆ. ಪ್ರಕಾಶನಾಥ ಸ್ವಾಮೀಜಿಯವರು ತಿಳಿಸಿದಂತೆ ಸುಮಾರು 1,500 ವೈದ್ಯರು ಹಾಗೂ 10 ಸಾವಿರಕ್ಕೂ ಹೆಚ್ಚು ಎಂಜಿನಿಯರ್‌ಗಳನ್ನು ರೂಪಿಸುವ ಕಾರ್ಯ ನಡೆದಿದೆ. ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿವರೆಗೂ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ” ಎಂದರು.

ವಿದ್ಯೆಯ ಜೊತೆಗೆ ಸಂಸ್ಕಾರ, ಸಂಸ್ಕೃತಿ ಮತ್ತು ಕ್ರೀಡೆಯ ಕಡೆಗೂ ಗಮನಕೊಡಿ

“ಚುಂಚನಗಿರಿ ಮಠ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿಗೂ ವಿಶೇಷ ಗಮನ ಹರಿಸುತ್ತಿದೆ. ವಿದ್ಯಾರ್ಥಿಗಳು ಕೇವಲ ವಿದ್ಯಾವಂತರಾದರೆ ಸಾಲದು. ಉತ್ತಮ ಸಂಸ್ಕಾರ ಹೊಂದಿರಬೇಕು. ಕ್ರೀಡೆ, ಜ್ಞಾನ ಮತ್ತು ಜೀವನ ಮೌಲ್ಯಗಳಲ್ಲೂ ಬೆಳೆಯಬೇಕು. ಇಂದಿನ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.

“ವಿದ್ಯಾ ದಾನಕ್ಕಿಂತ ದೊಡ್ಡ ಧರ್ಮ ಮತ್ತೊಂದಿಲ್ಲ ಎಂಬ ಮಾತನ್ನು ಚುಂಚನಗಿರಿ ಮಠ ತನ್ನ ಕಾರ್ಯದ ಮೂಲಕ ನಿಜ ಮಾಡಿದೆ. ಮನುಷ್ಯನಿಗೆ ವಿದ್ಯೆ ಇದ್ದರೆ ವಿನಯ ಬರುತ್ತದೆ. ವಿನಯದಿಂದ ಯೋಗ್ಯತೆ, ಯೋಗ್ಯತೆಯಿಂದ ಹಣ, ಹಣದಿಂದ ಧರ್ಮ, ಧರ್ಮದಿಂದ ಸುಖ ಲಭಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಪಾಲಿಸಿಕೊಂಡು ಸುಖವಾಗಿ ಬದುಕಬೇಕು. ‘ಮಾನವನ ಸೇವೆಯೇ ಮಾಧವನ ಸೇವೆ’ ಎಂಬ ಘೋಷವಾಕ್ಯದ ಮೂಲಕ ಮಠ ಜನರಲ್ಲಿ ಅರಿವು ಮೂಡಿಸುತ್ತಿದೆ” ಎಂದು ಹೇಳಿದರು.

“ವಿದ್ಯಾರ್ಥಿಗಳು ತಾವು ಕಲಿತ ಶಿಕ್ಷಣ ಸಂಸ್ಥೆ, ತಂದೆ-ತಾಯಿ ಹಾಗೂ ಶಿಕ್ಷಕರನ್ನು ಎಂದಿಗೂ ಮರೆಯಬಾರದು. ಬೇರು ಮರೆತರೆ ಫಲ ಸಿಗುವುದಿಲ್ಲ. ನಿಮ್ಮ ಶಿಕ್ಷಣ ಸಂಸ್ಥೆಯೇ ನಿಮ್ಮ ಬೇರು, ಶಿಕ್ಷಕರೇ ನಿಮ್ಮ ಭದ್ರ ಬುನಾದಿ. ಬೇರುಗಳನ್ನು ಮರೆಯಬಾರದು” ಎಂದು ಕಿವಿಮಾತು ಹೇಳಿದರು.

“ಹಳೆಯ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಸಂಘಗಳನ್ನು ರಚಿಸಿಕೊಳ್ಳಬೇಕು. ವರ್ಷಕ್ಕೊಮ್ಮೆಯಾದರೂ ಎಲ್ಲರೂ ಒಂದೆಡೆ ಸೇರಬೇಕು. ತಾವು ಕಲಿತ ಸಂಸ್ಥೆಗೆ ಮರಳಿ ಬಂದು ಪ್ರಸ್ತುತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಪಾಲ್ಗೊಳ್ಳಬೇಕು” ಎಂದು ಸಲಹೆ ನೀಡಿದರು.

Related Articles

Back to top button