*ಪೊಲೀಸ್ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಧನ್ವೀರ್*: *ಡಿಕೆಶಿ, ಝೈದ್ ಖಾನ್ ಹೆಸರೂ ಪ್ರಸ್ತಾಪ*

ಪ್ರಗತಿವಾಹಿನಿ ಸುದ್ದಿ: ನಟ ದರ್ಶನ್ ಕುಟುಂಬದ ಸುತ್ತ ಮತ್ತೊಂದು ವಿವಾದ ಸದ್ದು ಮಾಡುತ್ತಿದೆ. ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ಗೆ ಕರೆ ಮಾಡಿ ನಿಂದಿಸಿದ ಆರೋಪ ನಟ ಧನ್ವೀರ್ ಗೌಡ ಅವರನ್ನು ಸುತ್ತಿಕೊಂಡಿದೆ. ಈ ಪ್ರಕರಣದ ವಿಚಾರಣೆ ವೇಳೆ ಧನ್ವೀರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಆದರೆ, ವೈರಲ್ ಆಗಿರುವ ಆಡಿಯೋ ಮತ್ತು ವಿಡಿಯೋ ವಿಚಾರದಲ್ಲಿ ಅವರು ನೀಡಿರುವ ಸ್ಪಷ್ಟನೆ ಈಗ ಗಮನ ಸೆಳೆದಿದೆ.
ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ನಿಜ ಎಂದು ಧನ್ವೀರ್ ಒಪ್ಪಿಕೊಂಡಿದ್ದಾರೆ. ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಕುಮಾರಸ್ವಾಮಿ ನಡೆಸಿದ ವಿಚಾರಣೆ ವೇಳೆ, “ನಾನು ನಾಗರಾಜ್ಗೆ ಕರೆ ಮಾಡಿ ಬೈದಿದ್ದು ನಿಜ. ನನ್ನ ತಪ್ಪಾಗಿದೆ ಸರ್, ಕ್ಷಮಿಸಿಬಿಡಿ” ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ಆದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ಅವರ ಪುತ್ರ ಝೈದ್ ಖಾನ್ ಬಗ್ಗೆ ತಾವು ಯಾವುದೇ ಹೇಳಿಕೆ ನೀಡಿಲ್ಲ ಎಂದು ಧನ್ವೀರ್ ಸ್ಪಷ್ಟಪಡಿಸಿದ್ದಾರೆ. ಆ ವಿಚಾರಕ್ಕೆ ಸಂಬಂಧಿಸಿದ ವಿಡಿಯೋ ಎಐ ಮೂಲಕ ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.
ವಿಜಯಲಕ್ಷ್ಮಿ ಮತ್ತು ಮ್ಯಾನೇಜರ್ ನಾಗರಾಜ್ ತಮ್ಮ ಮನೆಗೆ ಬಂದು ಗಲಾಟೆ ಮಾಡಿದ್ದರು. ಈ ಸಂದರ್ಭದಲ್ಲಿ ತಮ್ಮ ತಂದೆ-ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ಕೋಪಗೊಂಡು ನಾಗರಾಜ್ಗೆ ದೂರವಾಣಿ ಕರೆ ಮಾಡಿ ಬೈದಿದ್ದೇನೆ ಎಂದು ಧನ್ವೀರ್ ವಿಚಾರಣೆ ವೇಳೆ ತಿಳಿಸಿದ್ದಾರೆ.
ಇದು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ಎಂದು ಹೇಳಿರುವ ಧನ್ವೀರ್, ಲೆಕ್ಕ ನೀಡಲು ತಾನು ಸಿದ್ಧನಿದ್ದೇನೆ. ಆದರೆ, ಅವರೇ ಲೆಕ್ಕ ಪಡೆಯಲು ಬರುತ್ತಿಲ್ಲ. ತನಗೆ ಕೆಟ್ಟ ಹೆಸರು ತರಲು ಈ ರೀತಿಯ ಆಡಿಯೋ ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನು, ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಧನ್ವೀರ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಅದರಂತೆ ಇದೀಗ ಅವರು ಆರ್.ಆರ್. ನಗರ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.



