ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನ ಕಡಿಮೆಯಾಗಿದೆ: ಸಿಎಂ ಯಡಿಯೂರಪ್ಪ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ದೂರದೃಷ್ಟಿವುಳ್ಳ, ರೈತರಿಗೆ ಅನುಕೂಲಕರವಾಗುವ ಹಾಗೂ ಕೃಷಿ ನೆಲೆಗಟ್ಟಿನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಜಾರಿ ಮಾಡಿರುವ ಬಜೆಟ್ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಒಟ್ಟಾರೆ ಬಜೆಟ್ ಗಾತ್ರ 2,37,893 ಕೋಟಿ ಆಗಿದೆ. ಕೇಂದ್ರದಿಂದ ರಾಜ್ಯಕ್ಕೆ ಬರುವ ತೆರಿಗೆ ಪಾಲು ಗಣನೀಯವಾಗಿ ಕಡಿಮೆ ಆಗಿದೆ. ಜಿಎಸ್​ಡಿ ಪರಿಹಾರ ಕೂಡ ಕಡಿಮೆಯಾಗಿದೆ. ಜಿಎಸ್ಟಿಯಿಂದ ಇಡೀ ದೇಶದಲ್ಲಿ ಕರ್ನಾಟಕಕ್ಕೆ ಹಿನ್ನಡೆ ಆಗಿದೆ. ಇದರಿಂದ ರಾಜ್ಯದ ಸಂಪನ್ಮೂಲ 15 ಸಾವಿರ ಕೋಟಿ ಕಡಿಮೆ ಆಗಿದೆ ಎಂದರು.

ಕೇಂದ್ರದಿಂದ ಅನುದಾನ ಕಡಿಮೆ ಆಗಿದೆ. ಆರ್ಥಿಕ ಪರಿಸ್ಥಿತಿ‌ ಸಂಕಷ್ಟದಲ್ಲಿದ್ದು, ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಆರ್ಥಿಕ ಸ್ಥಿತಿಯನ್ನು ಸರಿ ದಾರಿಗೆ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇವೆ. ಸಂಪನ್ಮೂಲ ಕ್ರೋಡೀಕರಣಕ್ಕೆ ತೆರಿಗೆ ಹೆಚ್ಚಳ ಅನಿವಾರ್ಯ. ಇದರಿಂದ 1500 ಕೋಟಿ ನಿರೀಕ್ಷೆ ಮಾಡಿದ್ದೇವೆ. ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಳದಿಂದ 1500 ಕೋಟಿ ಆದಾಯ ಬರುವ ನಿರೀಕ್ಷೆ ಇದೆ. ಲಿಕ್ಕರ್​ನಿಂದ  1200 ಕೋಟಿ ಆದಾಯ ಬರುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಬಜೆಟ್ ನಲ್ಲಿ ಕೃಷಿ ಉತ್ತೇಜನಕ್ಕಾಗಿ ಭೂ ಮತ್ತು ಜಲ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಏತ ನೀರಾವರಿಗೆ 5 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಮಳೆಯಾಧಾರಿತ ಕೃಷಿ ಯೋಜನೆ ರೂಪಿಸಲಾಗಿದೆ. ಹಾಗೆಯೇ ಆಡಳಿತ ಸುಧಾರಣೆಗೆ ಹಲವು ಯೋಜನೆ ಜಾರಿ ಮಾಡಲಾಗಿದೆ. ಬೆಳಗಾವಿ ಸುವರ್ಣ ಸೌಧಕ್ಕೆ ಕೆಲ ಇಲಾಖೆಗಳ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರವಾಸೋದ್ಯಮಕ್ಕ ಹೆಚ್ಚು ಒತ್ತು ನೀಡಲಾಗಿದ್ದು, 500 ಕೋಟಿ ಮೀಸಲಿಡಲಾಗಿದೆ. ಕಳಸಾ ಬಂಡೂರಿ ಯೋಜನೆಗೆ 500 ಕೋಟಿ ಮೀಸಲಿಡಲಾಗಿದ್ದು, ಕಳಸಾ ಬಂಡೂರಿ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಎತ್ತಿನ ಹೊಳೆಗೆ‌ 1500 ಕೋಟಿ ನೀಡಲಾಗಿದೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button