Kannada NewsKarnataka News

ಜಾತ್ರೆಗೆ ಹೊರಟಿದ್ದೀರಾ? ಈ ಸುದ್ದಿ ಓದಿ ಹೋಗಿ… ಕರೋನಾ ಬಗ್ಗೆ ತಿಳಿದುಕೊಳ್ಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:   ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿರುವ ಕರೋನಾ (ಕೋವಿಡ್ ೧೯) ವೈರಸ್ ನಿಯಂತ್ರಣಕ್ಕೆ ಹಾಗೂ ಒಂದು ವೇಳೆ ಸೋಂಕಿತರು ಕಂಡುಬಂದಲ್ಲಿ ತಕ್ಷಣವೇ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಜನರು ಭಯಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸಮೀಕ್ಷಾ ಘಟಕದ ವತಿಯಿಂದ ಶುಕ್ರವಾರ (ಮಾ.೬) ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತ್ತಿಚಿನ ದಿನಗಳಲ್ಲಿ ಕರೊನಾ ವೈರಸ್ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು ಬರುತ್ತಿವೆ. ಕರೋನಾ ವೈರಸ್ ಸಂಬಂಧಿಸಿದಂತೆ ಸರ್ಕಾರವು ಎಲ್ಲ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ. ಸಾಮಾಜಿಕ ಜಾಲತಾಣಗಳು ಮತ್ತು ಕೆಲ ಮಾಧ್ಯಮಗಳಲ್ಲಿನ ತಪ್ಪು ಮಾಹಿತಿಗಳಿಂದ ಜನರ ಆತಂಕ ಹೆಚ್ಚಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಪ್ರತ್ಯೇಕ ವಾರ್ಡಗಳ ಸ್ಥಾಪನೆ:
ಸೋಂಕಿತರಿಗೆ ತುರ್ತು ಚಿಕಿತ್ಸೆ ನೀಡಲು ಅಗತ್ಯವಿರುವ ಪ್ರತ್ಯೇಕ ವಾರ್ಡಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಈಗಾಗಲೇ ಸ್ಥಾಪಿಸಲಾಗಿದ್ದು, ಅದೇ ರೀತಿ ತಾಲೂಕಾ ಆಸ್ಪತ್ರೆಗಳಲ್ಲೂ ಪ್ರತ್ಯೇಕ ವಾರ್ಡಗಳನ್ನು ಸ್ಥಾಪಿಸಬೇಕು. ಅಗತ್ಯ ಔಷಧಿಗಳ ಸಂಗ್ರಹ ಮಾಡಿಟ್ಟುಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ನಿರ್ದೇಶನ ನೀಡಿದರು.
ಕರೊನಾ ವೈರಸ್ ತಡೆಗಟ್ಟಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಅದನ್ನು ತಕ್ಷಣವೇ ಕೈಗೊಳ್ಳಬೇಕು. ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದರ ಜತೆಗೆ ಜನರಲ್ಲಿನ ಆತಂಕವನ್ನು ದೂರ ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು.
ಮುಂಜಾಗೃತವಾಗಿ ಐಸೊಲೇಷನ್ ವಾರ್ಡಗೆ ಬೇಕಾಗುವ ಎಲ್ಲಾ ತಯಾರಿ ಮಾಡಿಕೊಳ್ಳಬೇಕು. ಕರೊನಾ ವೈರಸ್ ಸಂಬಂಧಿಸಿದಂತೆ ಮಾಧ್ಯಮಗಳ ಪ್ರತಿನಿಧಿಗಳು ಮಾಹಿತಿ ಕೇಳಿದರೆ ತಕ್ಷಣವೇ ಸೂಕ್ತ ಮಾಹಿತಿಯನ್ನು ಒದಗಿಸಬೇಕು ಎಂದು ತಿಳಿಸಿದರು.
ಗ್ರಾಮಿಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲು ತಾಲೂಕ ಪಂಚಾಯತ ಮತ್ತು ಗ್ರಾಮ ಪಂಚಾತಗಳಲ್ಲಿ ಸಮಿತಿಗಳನ್ನು ರಚನೆ ಮಾಡಬೇಕು ಎಂದು ಸೂಚನೆ ನೀಡಿದರು.

ಅಧಿಕ ಬೆಲೆಗೆ ಮಾಸ್ಕ್ ಮಾರಾಟ- ಲೈಸೆನ್ಸ್ ರದ್ದುಗೊಳಿಸುವ ಎಚ್ಚರಿಕೆ:

ಕರೋನಾ ವೈರಸ್ ಹರಡುವ ಭೀತಿಯಿಂದ ಹೆಚ್ಚಿನ ಸಂಖ್ಯೆಯ ಜನರು ಮಾಸ್ಕ್ ಗಳನ್ನು ಖರೀದಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಔಷಧ ಅಂಗಡಿಗಳು ಅಥವಾ ಔಷಧ ಮಳಿಗೆಗಳು ಎಂ.ಆರ್.ಪಿ. ದರಕ್ಕಿಂತ ಹೆಚ್ಚಿನ ಹಣ ಪಡೆದುಕೊಂಡರೆ ಅಂತಹ ಅಂಗಡಿಗಳ ಲೈಸೆನ್ಸ್ ರದ್ದು ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು.
ಮಾಸ್ಕಗಳನ್ನು ಯಾರಾದರೂ ರಸ್ತೆಬದಿ ಮಾರಾಟ ಮಾಡುವುದು ಕಂಡುಬಂದರೆ ಅಂತಹವರ ಬಗ್ಗೆ ಡ್ರಗ್ಸ್ ಕಂಟ್ರೋಲರ್ ಮತ್ತು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿಕೊಂಡರು.
ಬೆಳಗಾವಿಯಲ್ಲಿ ೯ ಜನರಿಗೆ ಕರೊನಾ ವೈರಸ್ ತಗುಲಿದೆ ಎಂದು ಮಾದ್ಯಮಗಳಲ್ಲಿ ಸುದ್ದಿ ಹರಿದಾಡಿದ್ದರಿಂದ ಜನರು ಆತಂಕಕ್ಕೆ ಒಳಗಾಗಿದ್ದರು. ಜನರಲ್ಲಿ ಇರುವ ಆತಂಕವನ್ನು ದೂರ ಮಾಡಲು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ತಾಲೂಕಾ ಪಂಚಾಯತಿಗಳಲ್ಲಿ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಿಗೆ ಸೂಚಿಸಿದರು.

ಜಾತ್ರೆ, ಹೋಳಿ ಮುನ್ನೆಚ್ಚರಿಕೆಗೆ ಸಲಹೆ:
ಜಿಲ್ಲೆಯಲ್ಲಿ ನಡೆಯುವ ಜಾತ್ರೆಗಳು ಮತ್ತು ಹೋಳಿ ಹಬ್ಬದ ಸಂದರ್ಭಗಳಲ್ಲಿ ಜನದಟ್ಟಣೆ ಹೆಚ್ಚಾಗುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಸೋಂಕು ತಗುಲದಂತೆ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಾತ್ರೆಗೆ ಬರುವ ಭಕ್ತಾಧಿಗಳು ಪರಸ್ಪರ ದೂರದಿಂದಲೇ ಸಂವಹನ ನಡೆಸಬೇಕು. ಹೋಳಿ ಹಬ್ಬದ ಹಿನ್ನೆಲೆ ರಾಸಾಯನಿಕ ಬಣ್ಣಗಳ ಬದಲಿಗೆ ಜೈವಿಕ ಬಣ್ಣಗಳನ್ನು ಉಪಯೋಗಿಸುವಂತೆ ಜನರಿಗೆ ತಿಳಿಸಬೇಕು ಎಂದು ಹೇಳಿದರು.
ತಾಲೂಕಾ ಆಸ್ಪತ್ರೆಗಳಲ್ಲಿ ಕರೊನಾ ಪ್ರಕರಣಗಳು ಕಂಡು ಬಂದರೆ ತಾಲೂಕಾ ಆಸ್ಪತ್ರೆಯ ವೈದ್ಯರು ತಕ್ಷಣ ಜಿಲ್ಲಾ ಆಸ್ಪತ್ರೆಯ ವೈದ್ಯರಿಗೆ ತಿಳಿಸಬೇಕು. ಪ್ರತಿಯೊಂದು ಶಾಲೆಗಳಲ್ಲಿ ಪ್ರಾರ್ಥನೆಯ ಸಮಯದಲ್ಲಿ ಮಕ್ಕಳಿಗೆ ಕರೊನಾ ವೈರಸ್ ಕುರಿತಾದ ಮಾಹಿತಿ ನೀಡಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಎಸ್. ಬಿ ಬೊಮ್ಮನಹಳ್ಳಿ ಅವರು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಬಿ.ಎನ್ ತುಕ್ಕಾರ ಅವರು ಮಾತನಾಡಿ, ಕರೋನ ವೈರಸ್ ಭಾರತ ಸೇರಿದಂತೆ ಜಗತ್ತಿನ ೮೦ ರಾಷ್ಟ್ರಗಳಲ್ಲಿ ಹರಡಿಕೊಂಡಿದೆ. ಭಾರತದಲ್ಲಿ ೨೯ ಕರೊನಾ ಪ್ರಕರಣಗಳು ಕಂಡು ಬಂದಿದ್ದು, ಕೇರಳದಲ್ಲಿ ಕಂಡುಬಂದಿದ್ದ ೩ ಕರೊನಾ ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಇಲ್ಲಿಯವರೆಗೆ ಯಾವುದೇ ಕರೊನಾ ವೈರಸ್ ಪ್ರಕರಣಗಳು ಕಂಡು ಬಂದಿಲ್ಲ. ಪ್ರಕರಣಗಳುನ್ನು ಪತ್ತೆ ಹಚ್ಚಲು ಸೋಂಕಿತರ ರಕ್ತದ ಮಾದರಿಗಳನ್ನು ಪುಣೆ ಮತ್ತು ಬೆಂಗಳೂರಿನ ಪ್ರಯೋಗಾಲಯಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಇದುವರೆಗೆ ಕರೊನಾ ಸೋಂಕಿಗೆ ಚಿಕಿತ್ಸೆ ಕಂಡುಹಿಡಿಯಲು ಆಗಿರುವುದಿಲ್ಲ; ಹಾಗಾಗಿ ರೋಗದ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕರೊನಾ ಸೋಂಕು ಹರಡುವ ರೀತಿ:
ತೀವ್ರ ಜ್ವರದ ಪ್ರಾರಂಭ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ಎದೆನೋವು, ತೀವ್ರ ಎದೆಬಡಿತ, ಕಿಡ್ನಿ ವೈಫಲ್ಯ, ತಲೆನೊವು, ಗಂಟಲು ನೋವು, ಹಾಗೂ ಭೇದಿ ಇವು ಕರೋನಾ ಸೋಂಕಿನ ಲಕ್ಷಣಗಳಾಗಿವೆ.
ಸಾಮಾನ್ಯ ಫ್ಲೂ ಹರಡುವ ರೀತಿಯಲ್ಲಿಯೇ ಕರೋನಾ ಹರಡುತ್ತದೆ. ಸಾಮಾನ್ಯವಾಗಿ ಸೋಂಕಿತರು ಕೆಮ್ಮಿದಾಗ ಸೀನಿದಾಗ ಈ ವೈರಸ್‌ಗಳು ಹರಡುತ್ತವೆ. ವೈಯಕ್ತಿಕ ಸ್ವಚ್ಛತೆ ಇಲ್ಲದೇ ಮೂಗು, ಬಾಯಿ ಪದೇ ಪದೆ ಮುಟ್ಟಿಕೊಳ್ಳುವುದರಿಂದ ಸೋಂಕು ಹರಡುವ ಸಾಧ್ಯತೆಗಳಿರುತ್ತವೆ.

ಕರೊನಾ ಸೋಂಕು- ಮುಂಜಾಗೃತ ಕ್ರಮಗಳು:
ಕೆಮ್ಮುವಾಗ ಸೀನುವಾಗ ಕೈವಸ್ತ್ರ ಉಪಯೋಗಿಸಬೇಕು, ಸೋಂಕು ಪಿಡಿತರಿಂದ ದೂರವಿರಬೇಕು, ಮಾಂಸ, ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು, ಸುರಕ್ಷಿತವಲ್ಲದ ಪ್ರಾಣಿ ಗಳನ್ನು ಮುಟ್ಟಬಾರದು ಹಾಗೂ ಟ್ರಿಪಲ್ ಲೇಯರ್ ಮಾಸ್ಕಗಳನ್ನು ಬಳಸಬೇಕು ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಬಿ.ಎನ್ ತುಕ್ಕಾರ ಅವರು ತಿಳಿಸಿದರು.
ಬಳಿಕ ಮಾತನಾಡಿದ ಜಿಲ್ಲಾಪಂಚಾಯತ ಸಿ.ಇ.ಓ ಡಾ. ರಾಜೇಂದ್ರ ಕೆ.ವಿ ಅವರು, ವಿದೇಶಗಳಿಂದ ಬರುವ ಪ್ರಯಾಣ ಕರ ಬಗ್ಗೆ ಮಾಹಿತಿಯನ್ನು ಕಲೆ ಹಾಕಬೇಕು. ಅಂತರಾಷ್ಟ್ರಿಯ ವಿಮಾನ ನಿಲ್ದಾಣಗಳಲ್ಲಿ ಕರೊನಾ ವೈರಸ್ ಹರಡುವುದನ್ನು ತಡೆಯಲು ತೀವ್ರ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಆದರೆ ಕನೆಕ್ಟಿಂಗ್ ವಿಮಾನಗಳ ಮೂಲಕ ಬರುವ ಪ್ರಯಾಣ ಕರ ಬಗ್ಗೆ ನಿಗಾ ವಹಿಸುವದು ಅವಶ್ಯಕತೆ ಇದೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಕಾರ್ಖಾನೆಗಳು ಹಾಗೂ ಕಂಪನಿಗಳು ಇರುವುದರಿಂದ ಆ ಪ್ರದೇಶದಲ್ಲಿ ಇರುವ ವಿದೇಶಿಗರ ಬಗ್ಗೆ ಮಾಹಿತಿ ಕಲೆ ಹಾಕಿ. ಅಕ್ಕಪಕ್ಕದ ರಾಜ್ಯಗಳಿಂದ ವಿದೇಶಿಗರು ಬಂದು, ಹೋಟಲ್ ಗಳಲ್ಲಿ ವಾಸವಾಗಿದ್ದಾರಾ ಎಂಬುದನ್ನು ಹೋಟೆಲ್ ಮಾಲೀಕರಿಗೆ ಸಂಪರ್ಕ ಮಾಡಿ ಮಾಹಿತಿ ಪಡೆಯಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ ಕೆ.ಎಚ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ವಿ.ಮುನ್ಯಾಳ, ಬಿಮ್ಸ್ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ ಸೇರಿದಂತೆ ಶಿಕ್ಷಣ, ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button