ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ : ಶಿಕ್ಷಕರ ಬಹುತೇಕ ಸಮಸ್ಯೆಗಳಿಗೆ ಬಜೆಟ್ನಲ್ಲಿ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿ ಶಿಕ್ಷಕರ ನಿರಂತರ ಹೋರಾಟವನ್ನು ಸ್ಥಗಿತಗೊಳಿಸಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶಕುಮಾರ ಅವರ ಭರವಸೆ ಲಕ್ಷಾಂತರ ಶಿಕ್ಷಕರಿಗೆ ನಿರಾಸೆ ಮೂಡಿಸಿದೆ.
ನುಡಿದಂತೆ ನಡೆಯದೆ ಶಿಕ್ಷಕರ ಸಂಘಟಿತ ಹೋರಾಟದ ಹಾದಿ ತಪ್ಪಿಸಿದ ಸಚಿವರ ನಡೆ ಕುರಿತು ಚಿಂತನ-ಮಂಥನ ಹಾಗೂ ಹೋರಾಟದ ರೂಪರೇಷೆಗಳ ಕುರಿತು ಮಾ.8ರಂದು ರಂದು ಮಧ್ಯಾಹ್ನ ೧ ಗಂಟೆಗೆ ಹುಬ್ಬಳ್ಳಿಯ ಲ್ಯಾಮಿಂಗಟನ್ ಪ್ರೌಢಶಾಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ನೌಕರರ ಒಕ್ಕೂಟದ ಸಭೆಯನ್ನು ಆಯೋಜಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಜಿ.ಆರ್.ಭಟ್ ಹೇಳಿದ್ದಾರೆ.
8 ರಂದು ನಡೆಯುವ ಸಭೆಯ ಅಧ್ಯಕ್ಷತೆಯನ್ನು ಮಾಜಿ ಶಿಕ್ಷಣ ಸಚಿವರು ಹಾಗೂ ವಿಧಾನಪರಿಷತ್ತಿನ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿಯವರು ವಹಿಸಲಿದ್ದು, ಸಭೆಯಲ್ಲಿ ನಾಡಿನ ಸರ್ವ ಸಮುದಾಯದ ಧಾರ್ಮಿಕ ಗುರುಗಳು ಮಾರ್ಗದರ್ಶನ ನೀಡಲಿದ್ದಾರೆ. ಕಳೆದ ಹಲವಾರು ದಿನಗಳಿಂದ ಹೋರಾಟ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲಾಗಿತ್ತು. ಆ ಹಿನ್ನೆಲೆಯಲ್ಲಿ ಜ.17 ರಂದು ರಾಜ್ಯಾದ್ಯಂತ ಶಾಲಾ ಕಾಲೇಜುಗಳ ಬಂದ್ಗೆ ಕರೆನೀಡಿದಾಗ ಜ.14 ರಂದು ಶಿಕ್ಷಣ ಸಚಿವರು ಸಭೆಯನ್ನು ಆಯೋಜಿಸಿ ಎಲ್ಲ ಸಮಸ್ಯೆಗಳಿಗೆ ಬಜೆಟ್ನಲ್ಲಿ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿ ಶಾಲಾ ಕಾಲೇಜು ಬಂದ್ ಮಾಡದಂತೆ ವಿನಂತಿಸಿದ್ದರು.
ಅಲ್ಲದೇ ಬಸವರಾಜ ಹೊರಟ್ಟಿಯವರ ಜೊತೆ ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳು ಚರ್ಚಿಸಿ ನಿಮ್ಮೆಲ್ಲ ಬೇಡಿಕೆಗಳು ನ್ಯಾಯಯುತವಾಗಿವೆ. ಖಂಡಿತವಾಗಿಯೂ ಈ ಬಜೆಟ್ನಲ್ಲಿ ಸ್ಪಂದಿಸುವುದಾಗಿ ಹೇಳಿದ್ದರು. ಆದರೆ ಒಂದೂ ಸಮಸ್ಯೆಗಳಿಗೆ ಸ್ಪಂದಿಸದೇ ಲಕ್ಷಾಂತರ ಶಿಕ್ಷಕರಿಗೆ ನಿರಾಸೆ ಉಂಟು ಮಾಡಿದ್ದಾರೆ.
ಶಿಕ್ಷಣ ಸಚಿವ ಸುರೇಶಕುಮಾರ ಅವರ ಬಗ್ಗೆ ಬಹಳಷ್ಟು ಶಿಕ್ಷಕ ಸಮೂಹ ಭರವಸೆಯನ್ನು ಇಟ್ಟುಕೊಂಡಿತ್ತು. ಒಬ್ಬ ಕಳಕಳಿಯುಳ್ಳ ಶಿಕ್ಷಣ ಸಚಿವರು ಸಿಕ್ಕಿದ್ದಾಗಿ ಹೇಳಿ ಶಿಕ್ಷಕ ಸಮೂಹ ಹರ್ಷವ್ಯಕ್ತಪಡಿಸಿತ್ತು. ಇವರ ಕಾಲದಲ್ಲಿ ಶಿಕ್ಷಕರು ನೆಮ್ಮದಿಯಿಂದ ಪಾಠ ಮಾಡುವುದಲ್ಲದೇ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆಂಬ ಭರವಸೆ ಮೂಡಿತ್ತು.
ಆದರೆ ಇವರೂ ಸಹ ಶಿಕ್ಷಕ ಸಮೂಹದಲ್ಲಿ ವಿಶ್ವಾಸವನ್ನು ಕಳೆದುಕೊಳ್ಳುವಂತಹ ಸ್ಥಿತಿ ಉಂಟಾಯಿತಲ್ಲ ಎಂಬ ನೋವು ಎಲ್ಲ ಶಿಕ್ಷಕರಲ್ಲಿದೆ. ಆ ಹಿನ್ನೆಲೆಯಲ್ಲಿ ಜ್ವಲಂತ ಸಮಸ್ಯೆಗಳಾದ ೧)೧೯೯೫ರ ನಂತರ ಪ್ರಾರಂಭವಾದ ಕನ್ನಡ ಶಾಲಾ ಕಾಲೇಜುಗಳಿಗೆ ಅನುದಾನ ನೀಡುವುದು. ೨) ಎನ್.ಪಿ.ಎಸ್ (NPS) ರದ್ದತಿ ಮಾಡುವುದು. ೩)ಕಾಲ್ಪನಿಕ ವೇತನ ಬಡ್ತಿಗಾಗಿ ಬಸವರಾಜ ಹೊರಟ್ಟಿ ವರದಿ ಜಾರಿಗೊಳಿಸುವುದು. ೪)ಶಿಕ್ಷಕ ಮತ್ತು ಮಕ್ಕಳ ಅನುಪಾತ ೧:೫೦ ನಿಯಮ ರೂಪಿಸುವುದು. ೫)ಜ್ಯೋತಿ ಸಂಜೀವಿನಿ ಅನುದಾನಿತ ಶಾಲಾ ಸಿಬ್ಬಂದಿಗಳಿಗೆ ವಿಸ್ತರಿಸುವದು. ೬)ಖಾಲಿ ಹುದ್ದೆಗಳ ಭರ್ತಿಗೆ (ಬೋಧಕ ಮತ್ತು ಬೋಧಕೇತರ) ಅನುಮತಿ ನೀಡುವುದು ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಗುವುದು.
ಅಲ್ಲದೇ ಮುಂದಿನ ಹೋರಾಟದ ರೂಪರೇಷೆಗಳನ್ನು ಹಾಕಿಕೊಳ್ಳಲಾಗುವುದು. ಸಭೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳು, ವಿವಿಧ ಶಿಕ್ಷಕ ಸಂಘಟನೆಯ ಮುಖ್ಯಸ್ಥರು ಹಾಗೂ ಶಿಕ್ಷಕರು ಭಾಗವಹಿಸಿ ಸಲಹೆ ಸೂಚನೆ ನೀಡಬೇಕೆಂದು ಗದಗ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಪ್ರಧಾನಕಾರ್ಯದರ್ಶಿ ಡಾ.ಬಸವರಾಜ ಧಾರವಾಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ಯಾಮ ಮಲ್ಲನಗೌಡ್ರ, ಜಿ.ಆರ್.ಭಟ್, ಧೀರೇಂದ್ರ ಹುಯಿಲಗೋಳ, ಎಸ್.ಎಂ.ಕೊಟಗಿ, ಎಚ್.ಪಿ.ಬಣಕಾರ, ಕೆ.ಬಿ.ಭಜಂತ್ರಿ ವ್ಹಿ.ವಿ ಬಳಿಗಾರ, ಎಂ.ಕೆ.ಲಮಾಣ , ಎಚ್.ಸಿ.ಚಕ್ಕಡಿಮಠ, ಝಡ್ಎಂ.ಖಾಜಿ, ಬಸವರಾಜ ಬಸನಗೌಡ್ರ, ಎಲ್.ಎಸ್.ಅರಳಹಳ್ಳಿ, ಎಸ್.ಎಂ.ಶೆಲ್ಲಿಕೇರಿ, ಮುಂತಾದವರು ವಿನಂತಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ