ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಕೆ ಎಲ್ ಇ ಕಾಲೇಜಿನಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಕಾಶ್ಮೀರಿ ವಿದ್ಯಾರ್ಥಿಗಳ ಜಾಮೀನು ಅರ್ಜಿಯನ್ನು ಹುಬ್ಬಳ್ಳಿಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ.
ನ್ಯಾಯಾಧೀಶರಾದ ಕೆ.ಎನ್. ಗಂಗಾಧರ ಅವರು ಜಾಮೀನು ಅರ್ಜಿ ತಿರಸ್ಕರಿಸಿದ್ದಾರೆ. ಸರ್ಕಾರಿ ವಕೀಲರು ಮತ್ತು ಆರೋಪಿತರ ಪರ ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ನೀಡಿದೆ. ಆದರೆ ಜಾಮೀನು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಆರೋಪಿತರ ಪರ ವಕೀಲರಿಗೆ ಅವಕಾಶವಿದೆ.
ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಹಿನ್ನಲೆಯಲ್ಲಿ ವಿಸ್ಯಾರ್ಥಿಗಳಾದ ಆಮಿರ್, ತಾಲಿಬ್ ಮತ್ತು ಬಾಸಿತ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದ್ದು, ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿದೆ.
ಮಾರ್ಚ್ 5 ರಂದು ಕಾಶ್ಮೀರದ ಮೂವರು ವಿದ್ಯಾರ್ಥಿಗಳ ದೇಶದ್ರೋಹಿ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರ ವಾದ ಮಂಡಿಸಲು ಹುಬ್ಬಳ್ಳಿಯ ವಕೀಲರು ಹಿಂದೇಟು ಹಾಕಿದ್ದರು. ನಂತರ ಬೆಂಗಳೂರಿನಿಂದ ಆಗಮಿಸಿದ ವಕೀಲರು ಆರೋಪಿಗಳ ಪರ ವಾದ ಮಂಡನೆ ಮಾಡಿದರು. ಮೈತ್ರೇಯಿ ಕೃಷ್ಣನ್ ನೇತೃತ್ವದ ಹತ್ತು ಜನ ವಕೀಲರ ತಂಡದಿಂದ ವಾದ ಮಂಡನೆ ಮಾಡಲಾಗಿತ್ತು. ವಿದ್ಯಾರ್ಥಿಗಳ ಪರವಾಗಿ ವಕಾಲತು ವಹಿಸಿದ್ದ ವಕೀಲರ ಕಾರಿನ ಮೇಲೂ ಹುಬ್ಬಳ್ಳಿಯಲ್ಲಿ ದಾಳಿ ನಡೆದಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ