ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಪ್ರತಿ ಶುಕ್ರವಾರ ಬೆಳಿಗ್ಗೆ ೧೧ ರಿಂದ ೧ ಗಂಟೆಯವರೆಗೆ ಪೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಶುದ್ಧ ಕುಡಿಯುವ ನೀರಿನ ಸಮಸ್ಯೆ ಹಾಗೂ ವಿವಿಧ ವಸತಿ ಯೋಜನೆಗಳ ಸಮಸ್ಯೆ ಕುರಿತು ನೇರವಾಗಿ ಸಾರ್ವಜನಿಕರೊಂದಿಗೆ ಮಾತನಾಡಲಿದ್ದು, ಸಾರ್ವಜನಿಕರು ನಿಗದಿಪಡಿಸಿದ ಸಮಯದಲ್ಲಿ ೦೮೩೧-೨೪೦೭೨೧೦ ಈ ಸಂಖ್ಯೆಗೆ ಕರೆ ಮಾಡಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿ ಹಬ್ಬ: ಮಾ.೧೩ ರಂದು ಮದ್ಯ ಮಾರಾಟ ನಿಷೇಧ
ಶಹಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ 13 ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮಾರ್ಚ 13 ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರಾದ ಬಿ.ಎಸ್. ಲೋಕೇಶ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದುಪೊಲೀಸ್ ಆಯುಕ್ತರಾದ ಬಿ.ಎಸ್. ಲೋಕೇಶ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1400 ರೂ. ಲಂಚ : ಪಿ.ಡಿ.ಒಗೆ 3 ವರ್ಷ ಕಠಿಣ ಶಿಕ್ಷೆ
ಆಸ್ತಿಯ ಮೇಲಿನ ಭೋಜಾ ಹಾಕಿಸಿಕೊಡಲು ಲಂಚ ಪಡೆದುಕೊಂಡಿದ್ದ ಖಾನಾಪೂರ ತಾಲ್ಲೂಕಿನ ಕೊಡಚವಾಡ ಗ್ರಾಮ ಪಂಚಾಯತಿಯ ಪ್ರಭಾರಿ ಪಿ.ಡಿ.ಒ ಮಹಾಬಳೇಶ್ವರ ಇಟಗೇಕರ ಅವರಿಗೆ ನ್ಯಾಯಾಲಯವು ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಫಿರ್ಯಾದಿದಾರರಾದ ಖಾನಾಪುರ ತಾಲ್ಲೂಕಿನ ಅವರೊಳ್ಳಿ ಗ್ರಾಮದ ವೀರಭದ್ರ ಯಲ್ಲಪ್ಪ ಕೋಲಕಾರ ಅವರ ಆಸ್ತಿಯ ಮೇಲಿನ ಭೋಜಾ ಹಾಕಿಸಿ ಕೊಡಲು ಆರೋಪಿ ಪಿ.ಡಿ.ಒ ಅವರು ೧೪೦೦ ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಲಂಚ
ಪಡೆದುಕೊಳ್ಳುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಆರೋಪಿತನನ್ನು ಬಂಧಿಸಿ, ಲಂಚದ ಹಣವನ್ನು ವಶಪಡಿಸಿಕೊಂಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ೪ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯ ವಿ. ಅವರು, ತಪ್ಪಿತಸ್ಥನಿಗೆ ಲಂಚಪ್ರತಿಬAಧಕ ಕಾಯ್ದೆ ೧೯೮೮ರ ಕಲಂ ೭ ಅಡಿಯಲ್ಲಿ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ೫ ಸಾವಿರ ರೂಪಾಯಿ ದಂಡ ವಿಧಿಸಿ ಬುಧವಾರ(ಮಾ.೧೧) ಆದೇಶ ಹೊರಡಿಸಿದ್ದಾರೆ.
ಅದೇ ರೀತಿ ಕಲಂ ೧೩(೧)(ಡಿ) ಸಹ ಕಲಂ ೧೩(೨) ಕೂಡ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ.
ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್ ಗೋಪಾಲ ಡಿ.ಜೋಗಿನ ಅವರು ಪ್ರಕರಣದ ತನಿಖೆ ಕೈಗೊಂಡು ನ್ಯಾಯಲಯಕ್ಕೆ ದೋಷಾರೊಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾದ ಪ್ರವೀಣ ಅಗಸಗಿ ಅವರು ನ್ಯಾಯಾಲಯದಲ್ಲಿ ಪ್ರಕರಣವನ್ನು ನಡೆಸಿ, ವಾದ ಮಂಡಿಸಿದ್ದರು.
ಯಡಿಯೂರಪ್ಪ ಮಾ.15ರಂದು ಬೆಳಗಾವಿಗೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾರ್ಚ ೧೫ ರಂದು ನಗರಕ್ಕೆ ಭೇಟಿ ನೀಡಲಿದ್ದಾರೆ.
ಅಂದು ಬೆಳಿಗ್ಗೆ ೧೦.೨೫ ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು ಖಾನಾಪುರ ರಸ್ತೆಯಲ್ಲಿರುವ ಶಗುನ್ ಗಾರ್ಡನನಲ್ಲಿ ನಡೆಯಲಿರುವ ಕರ್ನಾಟಕ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಅವರ ಪುತ್ರಿ ಡಾ.ಪೂಜಾ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ನಂತರ ೧೧ ಗಂಟೆಗೆ ಆಟೋನಗರದಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಪಟ್ಟಣಗಳ ಬ್ಯಾಂಕ್ ಮಹಾಮಂಡಳ ನಿ, ಬೆಂಗಳೂರು ಅವರ ವತಿಯಿಂದ ಆಯೋಜಿಸಿರುವ ಮಹಾಮಂಡಳದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ ೩ ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ತೆರಳಿಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.