ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ವೈರಸ್ ವಿರುದ್ಧ ಕೈಗೊಂಡ ಕ್ರಮಗಳ ಕುರಿತ ಸುದ್ದಿಯನ್ನು ಜನರಿಗೆ ತಿಳಿಸುವ ವಿಚಾರದಲ್ಲಿ ಆರೋಗ್ಯ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಒಮ್ಮತದಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಕುಮಾರಸ್ವಾಮಿ ಅವರು ಬಾಲಿಶ ಹೇಳಿಕೆ ನೀಡಿದ್ದನ್ನು ಗಮನಿಸಿದ್ದೇನೆ. ವಿಪತ್ತನ್ನು ಎದುರಿಸಲು ಸಿಎಂ ಯಡಿಯೂರಪ್ಪ ಅವರ ಆದೇಶದಂತೆ ರಾಜ್ಯಸರ್ಕಾರ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿದ್ದು ಆರೋಗ್ಯ ಸಚಿವ ಶ್ರೀರಾಮುಲು ಮತ್ತು ನಾನು ಪರಸ್ಪರ ಸಮನ್ವಯದಿಂದ ಕರ್ತವ್ಯ ನಿರ್ವಹಿಸುತ್ತದ್ದೇವೆ ಎಂದಿದ್ದಾರೆ.
ಕುಮಾರಸ್ವಾಮಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸುಧಾಕರ್, ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು, ಸೋಂಕಿತರ ಪತ್ತೆಗೆ ಸರ್ವ ಪ್ರಯತ್ನ, ಸೋಂಕಿತರ ಚಿಕಿತ್ಸೆಗೆ ಎಲ್ಲ ಸೌಕರ್ಯ, ಪ್ರತ್ಯೇಕ ನಿಗಾ ಘಟಕಗಳು, ತಜ್ಞ ವೈದ್ಯರ ಮತ್ತು ಇತರ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ರಾಜ್ಯಸರ್ಕಾರ ತೆಗೆದುಕೊಂಡಿದೆ. ಇದನ್ನು ಜನರೂ ಮೆಚ್ಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೇ ಮಾಜಿ ಮುಖ್ಯಮಂತ್ರಿಗಳಲ್ಲಿ ನನ್ನ ವಿನಂತಿಯೆಂದರೆ, ಈ ಸೂಕ್ಷ್ಮ ಪರಿಸ್ಥಿತಿಗಳಲ್ಲಿ ರಾಜಕೀಯ ಬದಿಗಿಟ್ಟು, ಜಾಗೃತಿ ಮೂಡಿಸುವ ಕೆಲಸದಲ್ಲಿ ಆದಷ್ಟು ಸಹಕರಿಸಿ. ತಾವು ಕೂಡ ಎಚ್ಚರಿಕೆಯಿಂದ ಇದ್ದು ಸುರಕ್ಷಿತವಾಗಿರಿ. ಇಂತಹ ಸಂದರ್ಭಗಳಲ್ಲಿ ಜನರಲ್ಲಿ ಆತಂಕ ಹೆಚ್ಚಿಸುವ ಯಾವುದೇ ಪ್ರಯತ್ನ ಅಪೇಕ್ಷಣೀಯವಲ್ಲ ಎಂದು ಗುಡುಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ