ಪ್ರಗತಿವಾಹಿನಿ ಸುದ್ದಿ; ಕೋಲಾರ: ಕೊರೊನಾ ವೈರಸ್ ಗೆ ರಾಜ್ಯ ತಲ್ಲಣಗೊಂಡಿದ್ದು, ಈ ನಡುವೆ ಮುನ್ನೆಚ್ಚರಿಕಾ ಕ್ರಮವಾಗಿ ಕೋಲಾರ ಜಿಲ್ಲೆಯಾದ್ಯಂತ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಕೋಲಾರದಲ್ಲಿ ಈವರೆಗೆ ಯಾವುದೇ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ, ಆದರೂ ಸೋಂಕು ಹರಡದಂತೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಜಿಲ್ಲೆಯ ಗಡಿಯಲ್ಲಿ ಕೊರೊನಾ ಚೆಕ್ ಪೋಸ್ಟ್ ತೆರೆಯಲು ಸೂಚಿಸಿದ್ದಾರೆ.
ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಜನರು ಒಟ್ಟಿಗೆ ಸೇರುವಂತಿಲ್ಲ, ಯಾವುದೇ ಸಂತೆ, ಜಾತ್ರೆ, ರಥೋತ್ಸವಗಳನ್ನು ಮಾಡುವಂತಿಲ್ಲ, ಸಭೆ ಸಮಾರಂಭಗಳನ್ನು ಕೂಡಾ ಮಾಡುವಂತಿಲ್ಲ, ಮಾಡಿದರೂ ಹೆಚ್ಚು ಜನ ಸೇರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೋಲಾರ ಜಿಲ್ಲೆ ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನ ಗಡಿ ಜಿಲ್ಲೆಯಾಗಿರುವ ಹಿನ್ನೆಲೆಯಲ್ಲಿ ಆಂಧ್ರ ಮತ್ತು ತಮಿಳುನಾಡಿನ ಗಡಿ ಸಂಪರ್ಕ ಮಾಡುವ ಜಿಲ್ಲೆಯ 6 ಕಡೆಗಳಲ್ಲಿ ಕೊರೊನಾ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದ್ದು, ಅಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಲಿದ್ದಾರೆ. ಇನ್ನು ಜಿಲ್ಲೆಯಲ್ಲಿ ಹೊರ ದೇಶಗಳಿಂದ ಬಂದಿರುವ ಒಟ್ಟು 36 ಜನರ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ