Kannada NewsKarnataka NewsLatest

ಗೋವಾ, ಮಹಾರಾಷ್ಟ್ರ ಬಸ್ ಸಂಚಾರ ಸಂಪೂರ್ಣ ಸ್ಥಗಿತ; ಜಿಲ್ಲೆಯಲ್ಲಿ 118 ಜನರ ಮೇಲೆ ನಿಗಾ

ಪ್ರಗತಿವಾಹಿನಿ ಸುದ್ದು, ಬೆಳಗಾವಿ : ಕರ್ನಾಟಕ -ಮಹಾರಾಷ್ಟ್ರ -ಗೋವಾ ಮಧ್ಯೆ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ರೀತಿಯ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

ಈ ಮೂರೂ ರಾಜ್ಯಗಳ ಮಧ್ಯೆ ಸರಕಾರಿ ಹಾಗೂ ಖಾಸಗಿ ಬಸ್ ಸಂಚಾರವನ್ನು ಸಹ ಬಂದ್ ಮಾಡಲಾಗಿದೆ. ಮೂರೂ ರಾಜ್ಯಗಳಿಂದ ಪರಸ್ಪರರ ರಾಜ್ಯಗಳಿಗೆ ಮುಂದಿನ ಸೂಚನೆಯವರೆಗೆ ಸಂಪೂರ್ಣ ಸಂಚಾರ ಬಂದ್ ಆಗಿದೆ ಎಂದು ಬೆಳಗಾವಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಸಿ ಮಹಾದೇವ ಮುಂಜಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ಕೊರೋನಾ ವೈರಸ್ ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಜಿಲ್ಲಾಧಿಕಾರಿ ಆದೇಶ

ಜಿಲ್ಲೆಯಲ್ಲಿ ಕೊವಿಡ್-19 ವೈರಾಣು ಹರಡುವುದನ್ನು ತಡೆಗಟ್ಟಲು ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಬೆಳಗಾವಿ ನಗರ ಹಾಗೂ ಬೆಳಗಾವಿ ಜಿಲ್ಲೆಗೆ ಆಗಮಿಸುವ ಮತ್ತು ನಿರ್ಗಮಿಸುವ ಸಾರ್ವಜನಿಕ ವಾಹನಗಳಾದ ಮ್ಯಾಕ್ಸಿಕ್ಯಾಬ್ ( 12 + 1 ) / ಬಸ್ ಸೇರಿದಂತೆ ಎಲ್ಲಾ ಭಾರಿ ಪ್ರಯಾಣಿಕರ ವಾಹನಗಳಾದ ಕಾಂಟ್ರಾಕ್ಟ್ ಕ್ಯಾರೇಜ್ / ಸ್ಟೇಜ್ ಕ್ಯಾರೇಜ್ / ಅಖಿಲ ಭಾರತ ಪ್ರವಾಸಿ ಬಸ್ ಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್. ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಶುಕ್ರವಾರ (ಮಾ.20) ರಂದು ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯ ನಿರ್ಣಯದಂತೆ ಬೆಳಗಾವಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಇಲ್ಲಿಗೆ ಆಗಮಿಸುವ ಮತ್ತು ನಿರ್ಗಮಿಸುವ ವಾಹನಗಳ ಸಂಚಾರ ನಿಷೇಧಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
” The Karnataka Epidemic Diseases , COVID – 19 Regulations , 2020 ರ ಪ್ರಕಾರ ಮುಂದಿನ ಆದೇಶದ ವರೆಗೆ ವಾಹನಗಳನ್ನು ಆಗಮನ ಮತ್ತು ನಿರ್ಗಮಿಸುವುದನ್ನು ನಿಷೇಧಿಸಲಾಗಿದೆ.
ಕರೊನಾ ವೈರಸ್ ಹರಡುವುದನ್ನು ತಡೆಗಟ್ಟುವ
ಕುರಿತು ಹಲವು ಅನುಸರಣಾ ಕ್ರಮಗಳನ್ನು ಪಾಲಿಸುವಂತೆ ಅವರು ತಿಳಿಸಿದ್ದಾರೆ.
ಸಂಚಾರ ನಿಷೇಧ ಆದೇಶದ ಅನ್ವಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ  ವಿಭಾಗೀಯ ನಿಯಂತ್ರಣಾಧಿಕಾರಿಗಳು, ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು , ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ವಾಹನಗಳು ಆಗಮಿಸುವುದನ್ನು ಮತ್ತು ಹೊರ ಹೋಗುವುದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಡಾ.ಎಸ್.ಬಿ . ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.

118 ಜನರ ಮೇಲೆ ನಿಗಾ

ಈ ಮಧ್ಯೆ , ಬೆಳಗಾವಿ ಜಿಲ್ಲೆಗೆ ವಿದೇಶದಿಂದ ಇದುವರೆಗೆ ೧೩೪ ಜನರು ಆಗಮಿಸಿದ್ದು, ಅದರಲ್ಲಿ ಮೂರು ಜನರು ೨೮ ದಿನಗಳ ಕ್ವಾರಂಟೈನ್(ಗೃಹ ನಿಗಾ) ಅವಧಿ ಪೂರ್ಣಗೊಳಿಸಿದ್ದಾರೆ. ಯಾವುದೇ ಪ್ರಕರಣದಲ್ಲೂ ಸೋಂಕು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಒಟ್ಟು ೧೧೮ ಜನರನ್ನು ಅವರವರ ಮನೆಯಲ್ಲಿಯೇ ನಿಗಾದಲ್ಲಿರಿಸಲಾಗಿದೆ.
೧೭ ಜನರು ೧೪ ದಿನಗಳ ಕ್ವಾರಂಟೈನ್ ಅವಧಿಯನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ.

ಇದುವರೆಗೆ ಒಟ್ಟು ಇಬ್ಬರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗಿದೆ ಎಂದು‌ ಅವರು ತಿಳಿಸಿದ್ದಾರೆ.

ಸಂಪೂರ್ಣ ಸ್ಕ್ರೀನಿಂಗ್:

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲ ಪ್ರಯಾಣಿಕರ ಸ್ಕ್ರೀನಿಂಗ್ (ತಪಾಸಣೆ) ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಅದೇ ರೀತಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರ ಆರೋಗ್ಯವನ್ನು ಕೂಡ ರೈಲು ನಿಲ್ದಾಣದಲ್ಲಿ ಕೂಡ ತಪಾಸಣೆ ನಡೆಸಲಾಗುತ್ತಿದೆ.
ಜಿಲ್ಲೆಯ ಗಡಿಯಲ್ಲಿ ಗೋವಾ ಮತ್ತು ಮಹಾರಾಷ್ಟ್ರ ದಿಂದ ಬಸ್ ನಲ್ಲಿ ಆಗಮಿಸುವ ಪ್ರಯಾಣಿಕರನ್ನು ಕೂಡ ಆರೋಗ್ಯ ಇಲಾಖೆಯ ತಂಡಗಳು ತಪಾಸಣೆ ನಡೆಸುತ್ತಿವೆ.
ಬಸ್ ನಿಲ್ದಾಣದಲ್ಲೂ ತಪಾಸಣಾ ಕಾರ್ಯ ನಡೆದಿದೆ.

ಸರಕಾರಿ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರು ಹಾಗೂ ಸಿಬ್ಬಂದಿಯ ಸ್ಕ್ರೀನಿಂಗ್ ಕೂಡ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಭಾನುವಾರ ಹೊಟೆಲ್ ಬಂದ್

ಭಾನುವಾರ (ಮಾ.22) ಜನತಾ ಕರ್ಫ್ಯೂಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವುದರಿಂದ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಹೊಟೆಲ್ ತೆರೆದಿರುವುದಿಲ್ಲ ಎಂದು ಹೊಟೆಲ್ ಅಸೋಸಿಯೇಶನ್ ತಿಳಿಸಿದೆ. ಅಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಎಲ್ಲಾ ಹೊಟೆಲ್ ಬಂದ್ ಆಗಲಿದೆ.

ಗಂಭೀರವಾಗುತ್ತಿರುವ ಕೊರೋನಾ: ಸಾರಿಗೆ ಸಂಚಾರ ಸ್ಥಗಿತಕ್ಕೆ ಚಿಂತನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button