ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಡೀ ರಾಷ್ಟ್ರವೇ ಭಾನುವಾರ ಜನತಾ ಕರ್ಫ್ಯೂದಲ್ಲಿದ್ದರೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ತಮ್ಮ ತಂಡದೊಂದಿಗೆ ಗಾರ್ಡನ್ ನಲ್ಲಿದ್ದರು.
ಬೆಳಗಾವಿಯ ಛತ್ರಪತಿ ಶಿವಾಜಿ ಗಾರ್ಡನ್ ನಲ್ಲಿ ಅಭಯ ಪಾಟೀಲ ಭಾನುವಾರ ಬೆಳಗ್ಗೆ ತಮ್ಮ ಸಹವರ್ತಿಗಳೊಂದಿಗೆ ಡೆಟಾಲ್ ಸಿಂಪರಣೆಯಲ್ಲಿ ತೊಡಗಿದ್ದರು. ಕೊರೋನಾ ವೈರಸ್ ಹರಡದಂತೆ ಗಾರ್ಡನ್ ನಲ್ಲಿರುವ ಮಕ್ಕಳ ಆಟಿಕೆಗಳು, ಕುಳಿತುಕೊಳ್ಳುವ ಆಸನಗಳು ಸೇರಿದಂತೆ ಎಲ್ಲೆಡೆ ಡೆಟಾಲ್ ಸಿಂಪಡಿಸಿ ಸ್ವಚ್ಛಗೊಳಿಸಿದರು.
ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಮನವಿಯನ್ನು ಈ ಬಿಜೆಪಿ ಶಾಸಕ ಉಲ್ಲಂಘಿಸಿದರೇ?
ಶಾಸಕ ಅಭಯ ಪಾಟೀಲ ಈ ಕಾರ್ಯಾಚರಣೆ ನಡೆಸಿದ್ದ ಮುಂಜಾನೆ 6 ಗಂಟೆಯಿಂದ 6.45ರ ವರೆಗೆ. ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯ ಪ್ರಕಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮನೆಯಲ್ಲೇ ಇರಬೇಕಿದ್ದ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನವೇ ಅಭಯ ಪಾಟೀಲ ಡೆಟಾಲ್ ಸಿಂಪಡಿಸುವ ಕಾರ್ಯ ನಡೆಸಿದರು. ಹಾಗಾಗಿ ಮೋದಿ ಸೂಚನೆ ಉಲ್ಲಂಘಿಸದೇ ತಮ್ಮ ಶ್ರಮದಾನ ಸಂಪ್ರದಾಯವನ್ನೂ ಮುಂದುವರಿಸಿದರು.
ಅಭಯ ಪಾಟೀಲ ಹಲವಾರು ವರ್ಷಗಳಿಂದ ಪ್ರತಿ ಭಾನುವಾರ ತಮ್ಮ ಸಹವರ್ತಿಗಳೊಂದಿಗೆ ಶ್ರಮದಾನ ನಡೆಸುತ್ತಾರೆ. ಚರಂಡಿ ಸ್ವಚ್ಛ ಮಾಡುವುದು, ರಸ್ತೆ ಅಭಿವೃದ್ಧಿ, ಶಾಲೆಗಳಿಗೆ ಬಣ್ಣ ಬಳಿಯುವುದು, ಗಿಡಗಳಿಗೆ ನೀರುಣ್ಣಿಸುವುದು, ವನಮಹೋತ್ಸವ ಮೊದಲಾದ ಕೆಲಸಗಳನ್ನು ಮಾಡುತ್ತ ಬಂದಿದ್ದಾರೆ.
ಭಾನುವಾರ ಜನತಾ ಕರ್ಫ್ಯೂ ಇದ್ದಿದ್ದರಿಂದ ಅದು ಆರಂಭವಾಗುವ ಮುನ್ನ ಅವರು ಶ್ರಮದಾನ ಸಂಪ್ರದಾಯವನ್ನು ಪೂರ್ಣಗೊಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ