ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ರಾಜ್ಯದಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ನಡುವೆ ಡಿಸಿಎಂ ಗೋವಿಂದ ಕಾರಜೋಳ, ರಾಜ್ಯದಲ್ಲಿ ಕೊರೊನಾ ಈಗ ಮೂರನೇ ಹಂತಕ್ಕೆ ತಲುಪಿದೆ ಎಂದು ಹೇಳಿಕೆ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಇಡೀ ದೇಶವನ್ನು ವ್ಯಾಪಿಸಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸರ್ಕಾರದ ನಿಯಮವನ್ನು ಕೆಲವರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಕೆಲವು ಕಿಡಿಗೇಡಿಗಳು ಎಷ್ಟು ಹೇಳಿದರೂ ಪಾಲಿಸುತ್ತಿಲ್ಲ. ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.
ಇದು ಮಾನವ ಕುಲಕ್ಕೆ ಬಂದ ವಿಪತ್ತು. ಸಾಮೂಹಿಕವಾಗಿ ಜನ ಸೇರಬಾರದು ಎಂದು ಮನವಿ ಮಾಡಿಕೊಂಡರೆ, ಎಲ್ಲರೂ ಅದನ್ನು ಸಹಕರಿಸಬೇಕು. ಒಂದು ವೇಳೆ ದೇಶಾದ್ಯಂತ ಕೊರೊನಾ ಹರಡಿದರೆ ಅದನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಿ ಎಂದು ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರಿಗೆ ಜನರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನರು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಹೇಳಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ಈಗಾಗಲೇ ದಿನಸಿ, ತರಕಾರಿ ಮನೆ ಮನೆಗೆ ತಲುಪಿಸಲಾಗುತ್ತಿದೆ. ಇದರಿಂದ ಜನದಟ್ಟಣೆಯಾಗೋದು ಕಡಿಮೆ ಆಗಿದೆ. ಬಾರ್, ವೈನ್ ಶಾಪ್ ಬಂದ್ ಮಾಡಿಸಲಾಗಿದೆ. ಬಂದ್ ಇರುವ ಕಾರಣ ಕಳ್ಳಬಟ್ಟಿ ಜೋರಾಗಿದೆ. ಕಳ್ಳಬಟ್ಟಿಗಾಗಿ ಒಂದೊಂದು ಊರಲ್ಲಿ ಹತ್ತು ಊರಿನ ಜನ ಮುಗಿಬಿದ್ದಿದ್ದಾರೆ ಎಂಬ ಅಂಶ ತಿಳಿದುಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗೆ ಹೇಳಿ ಬಂದ್ ಮಾಡಿಸಲಾಗಿದೆ ಎಂದು ವಿವಾರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ