ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ತೆಲಂಗಾಣದ 6 ಮಂದಿ ಸೇರಿದಂತೆ ಒಟ್ಟು 10 ಜನ ಮಾರಣಾಂತಿಕ ಕೊರೊನಾ ಸೊಂಕಿಗೆ ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಾದಾಲ್ಲಿ ಭಾಗಿಯಾಗಿದ್ದ 2000 ಜನರನ್ನು ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಕ್ವಾರಂಟೈನ್ನಲ್ಲಿ ಇರಿಸಲಾಗಿರುವ 24 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ದೇಶದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುವ ಆತಂಕ ಎದುರಾಗಿದೆ. ಕೊರೋನಾ ಭೀತಿಯಿಂದ ನಿಜಾಮುದ್ದೀನ್ನಿಂದ 1,034 ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯನ್ನು ಏರ್ಪಡಿಸಿತ್ತು. ಇದರಲ್ಲಿ ಇಂಡೋನೇಷ್ಯಾ ಹಾಗೂ ಮಲೇಷ್ಯಾದವರು ಸೇರಿ ಸುಮಾರು 2 ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು. ಮಾರ್ಚ್ 1ರಿಂದ 15ರವರೆಗೆ ದೆಹಲಿಯ ಪಶ್ಚಿಮದ ನಿಜಾಮುದ್ದೀನ್ನಲ್ಲಿ ಈ ಧಾರ್ಮಿಕ ಸಭೆ ನಡೆದಿತ್ತು. ಈ ಕಾರ್ಯಕ್ರಮದ ನಂತರವೂ ತುಂಬಾ ಜನ ಜಮಾತ್ನ ಮರ್ಕಜ್ನಲ್ಲಿ ಉಳಿದುಕೊಳ್ಳುವುದನ್ನು ಮುಂದುವರಿಸಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಧಾರ್ಮಿಕ ಸಭೆಯನ್ನು ಆಯೋಜಿಸಿದ್ದ ಮೌಲಾನಾ ವಿರುದ್ಧ ದೆಹಲಿ ಸರ್ಕಾರ ಎಫ್ಐಆರ್ ದಾಖಲಿಸಿದೆ. ದೆಹಲಿಯ ಮೂರ್ನಾಲ್ಕು ಆಸ್ಪತ್ರೆಗಳಲ್ಲಿ ನಿಜಾಮುದ್ದೀನ್ ಸಭೆಗೆ ಆಗಮಿಸಿದ್ದವರನ್ನು ಸೇರಿಸಿ, ನಿಗಾದಲ್ಲಿ ಇರಿಸಲಾಗಿದೆ. ಅವರಲ್ಲಿ 1 ಆಸ್ಪತ್ರೆಯ 24 ಜನರಿಗೆ ಸೋಂಕು ಹರಡಿರುವುದು ಖಚಿತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ