ಪ್ರಗತಿವಾಹಿನಿ ಸುದ್ದಿ, ಖಾನಾಪುರ : ಕ್ಷೇತ್ರದ ಶಾಸಕಿ ಡಾ.ಅಂಜಲಿ ಹೇಮಂತ ನಿಂಬಾಳಕರ ಅವರು ಕೊವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾಲೂಕಾ ಕಾರ್ಯಪಡೆಯ ಸಭೆ ನಡೆಸಿದರು.
ತಾಲೂಕಾ ಪಂಚಾಯತ ಆವರಣದಲ್ಲಿ ತೆರೆದ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಏರ್ಪಡಿಸಲಾಗಿದ್ದ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಕೊರೊನಾ ವೈರಸ್(COVID-19) ಕುರಿತು ತಾಲೂಕಿನಾದ್ಯಂತ ವ್ಯಾಪಕವಾಗಿ ಪ್ರಚಾರ ನಡೆಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಜಾಗೃತಿ ಮೂಡಿಸುವುದು.
ದಿನವಿಡೀ ತೆರೆಯಲ್ಪಟ್ಟಿರುವ ಅಂಗಡಿಗಳನ್ನು ಬೆಳಿಗ್ಗೆ ಮತ್ತು ಸಂಜೆ ಸೀಮಿತ ಅವಧಿಯಲ್ಲಿ ಮಾತ್ರ ತೆರೆದಿರುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳಿಗೆ ತೆರೆಯಲು ಅವಕಾಶ ನೀಡದಂತೆ ನೋಡಿಕೊಳ್ಳುವುದು.
ಸರ್ಕಾರದ ನಿರ್ದೇಶನದಂತೆ ಎರಡು ತಿಂಗಳ ಪಡಿತರವನ್ನು ಈಗ ಒಂದು ವಾರದೊಳಗೆ ಒಮ್ಮೆಲೇ ವಿತರಿಸುವುದನ್ನು ಖಾತ್ರಿಪಡಿಸಿಕೊಳ್ಳುವುದು.
ಪ್ರಸ್ತುತ ಬೇಸಿಗೆ ತಾಪಮಾನವೂ ಹೆಚ್ಚುತ್ತಿದ್ದು ಖಾನಾಪುರ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮವಹಿಸುವುದು.
ಕೃಷಿ ಉತ್ಪನ್ನಗಳಾದ ತರಕಾರಿ ಮತ್ತು ಹಣ್ಣುಗಳಿಗೆ ಯಾವುದೇ ತೊಂದರೆಯಾಗದಂತೆ ಮಾರುಕಟ್ಟೆ ಮತ್ತು ಸಾಗಾಣಿಕೆ ವ್ಯವಸ್ಥೆ ಕಲ್ಪಿಸುವ ಮೂಲಕ ರೈತರಿಗೆ ನಷ್ಠವಾಗದಂತೆ ಕ್ರಮವಹಿಸುವುದು.
ತಾಲೂಕಿನ ವಿವಿಧ ಕಡೆಗಳಲ್ಲಿ, ಅಂದರೆ ಖಾನಾಪೂರ ಪಟ್ಟಣ, ಬೀಡಿ, ಲೋಡಾ ಮತ್ತಿತರ ಕಡೆಗಳಲ್ಲಿ ಟೆಂಟ್ ಗಳಲ್ಲಿ ವಾಸಿಸುತ್ತಿರುವ ಅಲೆಮಾರಿಗಳಿಗೆ ಊಟದ ವ್ಯವಸ್ಥೆ ಮಾಡುವುದು.
ಹೊರ ರಾಜ್ಯ/ಜಿಲ್ಲೆ ಗಳಿಂದ ಬರುವ ಮತ್ತು ಈಗಾಗಲೇ ಬಂದಿರುವವರ ಮೇಲೆ ಸದಾ ಗಮನವಿರಿಸಿ ಅವರು ನೆಯಿಂದ ಹೊರಬರದಂತೆ ನೋಡಿಕೊಳ್ಳುವುದು ಮತ್ತು ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತುರ್ತು ಕ್ರಮವಹಿಸಿ ಸೂಕ್ತ ವೈದ್ಯಕೀಯ ಕ್ರಮ ಜರುಗಿಸುವುದು.
ಎಲ್ಲ ಗ್ರಾಮಗಳಲ್ಲೂ ಔಷದಧಿ ಸಿಂಪಡಣೆ ಮೂಲಕ ಯಾವುದೇ ರೋಗಾಣುಗಳು ಹರಡದಂತೆ ಕ್ರಮವಹಿಸುವುದು.
ಈ ಸಂದರ್ಭದಲ್ಲಿ ಕರ್ತವ್ಯದಲ್ಲಿ ತೊಡಗಿರುವ ಎಲ್ಲ ಅಧಿಕಾರಿಗಳು ಮತ್ತು ನೌಕರರು ತಮ್ಮ ಸುರಕ್ಷತೆಗೆ ಮೊದಲು ಆದ್ಯತೆ ನೀಡಿ, ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಕರ್ತವ್ಯದಲ್ಲಿ ತೊಡಗುವುದು.
ತಹಸಿಲ್ದಾರ ರೇಷ್ಮಾ ತಾಳಿಕೋಟೆ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ