ಬೆಳಗಾವಿಯಲ್ಲೂ ವಿಕೃತಿ ಮೆರೆಯುತ್ತಿರುವ ಕೊರೋನಾ ಸೋಂಕಿತರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲಾಡಳಿತ ಯಾಕೆ ಈ ರೀತಿ ವರ್ತಿಸುತ್ತಿದೆ ತಿಳಿಯುತ್ತಿಲ್ಲ. ಕೊರೋನಾದಂತಹ ಸಂದಗ್ದ ಪರಿಸ್ಥಿತಿಯಲ್ಲೂ ಜನರು ಇಷ್ಟೊಂದು ತಾಳ್ಮೆಯಿಂದ ಸಹಕರಿಸುತ್ತಿರುವಾಗ ಜಿಲ್ಲಾಡಳಿತ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ, ಉದಾರತೆ ತೋರಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ಹಾಗೂ ವೈದ್ಯಕೀಯ ಸೇರಿದಂತೆ ಹಲವು ಸಿಬ್ಬಂದಿ ಅಳಲಾಗಿದೆ.
ಒಂದೆಡೆ ಸೌಲಭ್ಯಗಳ ಕೊರತೆ, ಇನ್ನೊಂದೆಡೆ ಸೋಂಕಿತರಿಂದ ವಿಕೃತಿ ಬೆಳಗಾವಿಯ ವೈದ್ಯಕೀಯ ಸಿಬ್ಬಂದಿ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿಗೆ ಮಾಸ್ಕ್, ಹ್ಯಾಂಡ್ ಗ್ಲೌಸ್, ಕುಡಿಯುವ ನೀರು ಸೇರಿದಂತೆ ಯಾವುದೇ ರೀತಿಯ ಸಮರ್ಪಕ ಸೌಲಭ್ಯಗಳು ಸಿಗುತ್ತಿಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡುವಾಗ ತಮಗೆ ಸೋಂಕು ತಗಲದಂತೆ ಎಚ್ಚರಿಕೆ ವಹಿಸಬೇಕಾದ ಸಿಬ್ಬಂದಿ ತೀವ್ರ ಆತಂಕದಿಂದ ಕೆಲಸ ಮಾಡುತ್ತಿದ್ದಾರೆ.
ಇನ್ನೊಂದಿಡೆ ಕೊರೋನಾ ಖಚಿತಗೊಂಡಿರುವ ರೋಗಿಗಳು ಉದ್ದೇಶಪೂರ್ವಕವಾಗಿ ಚಿಕಿತ್ಸೆ ಸಂದರ್ಭದಲ್ಲಿ ವಿಕೃತಿ ಮೆರೆಯುತ್ತಿದ್ದಾರೆ. ಎಲ್ಲೆಂದರಲ್ಲಿ, ಕೆಲವೊಮ್ಮೆ ಸಿಬ್ಬಂದಿ ಮೇಲೆಯೇ ಉಗುಳುತ್ತಿದ್ದಾರೆ. ಕೆಲವು ಶಂಕಿತರೂ ಸಹ ಇದೇ ರೀತಿ ವರ್ತಿಸುತ್ತಿದ್ದಾರೆ ಎನ್ನುವುದು ವೈದ್ಯಕೀಯ ಸಿಬ್ಬಂದಿ ಅಳಲಾಗಿದೆ. ವಿಶೇಷವಾಗಿ ದೆಹಲಿಯಿಂದ ಬಂದಿರುವ ರೋಗಿಗಳೇ ವೈದ್ಯಕೀಯ ಸಿಬ್ಬಂದಿ ಜೊತೆ ಸರಿಯಾಗಿ ವರ್ತಿಸುತ್ತಿಲ್ಲ. ಅನಗತ್ಯ ಕಿರಿಕಿರಿ ಮಾಡುತ್ತಿದ್ದಾರೆ ಎನ್ನುತ್ತಾರೆ ಕರ್ತವ್ಯದಲ್ಲಿರುವ ಸಿಬ್ಬಂದಿ. ಅವರಿಗೆ ಚಿಕಿತ್ಸೆ ಪಡೆಯುವುದು ಬೇಕಿಲ್ಲ ಎನ್ನುವ ರೀತಿಯಲ್ಲಿ ಹಾಗೂ ರೋಗವನ್ನು ಮತ್ತಷ್ಟು ಹರಡುವ ಉದ್ದೇಶ ಹೊಂದಿರುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎನ್ನುತ್ತಾರೆ ಪ್ರಗತಿವಾಹಿನಿ ಜೊತೆ ಮಾತನಾಡಿದ ಕೆಲವು ನರ್ಸ್ ಗಳು.
ಈಗಾಗಲೆ ಸಿಬ್ಬಂದಿ ಈ ಕುರಿತು ಬಿಮ್ಸ್ ನಿರ್ದೇಶಕರಿಗೂ ದೂರು ಸಲ್ಲಿಸಿದ್ದಾರೆ.
ಇನ್ನು ಮಾರುಕಟ್ಟೆಯಲ್ಲಿ ಮಾಸ್ಕ್ ಹಾಗೂ ಸೆನಿಟೈಸರ್ ಗಳನ್ನು ಮನಸ್ಸಿಗೆ ಬಂದ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಜನರಿಗೆ ಅನಿವಾರ್ಯವಾಗಿರುವುದರಿಂದ ಹೇಳಿದಷ್ಟು ಹಣಕೊಟ್ಟು ಖರೀದಿಸುತ್ತಿದ್ದಾರೆ. ಆದರೆ ಸಕ್ಕರೆ ಕಾರ್ಖಾನೆಗಳು ಬೇಕಾದಷ್ಟು ಸೆನಿಟೈಸರ್ ಪೂರೈಸಲು ಸಿದ್ದವಿವೆ. ಮಹಿಳಾ ಸಂಘಟನೆಗಳು, ಆರ್ ಎಸ್ಎಸ್ ನಂತಹ ಸಂಘಟನೆಗಳು ಮಾಸ್ಕ್ ಗಳನ್ನು 10 -12 ರೂ.ದರದಲ್ಲಿ ಬೇಕಾದಷ್ಟು ಪೂರೈಸಲು ಸಿದ್ದವಿವೆ. ಆದರೆ ಜಿಲ್ಲಾಡಳಿತ ಅದಕ್ಕೆ ಅವಕಾಶ ನೀಡುತ್ತಿಲ್ಲ. ಅನಗತ್ಯವಾಗ ಮಾರುಕಟ್ಟೆಯಲ್ಲಿ ಕೊರತೆ ಸೃಷ್ಟಿಸಿ, ಜನರನ್ನು ಸುಲಿಯಲಾಗುತ್ತಿದೆ ಎಂದು ಬಿಜೆಪಿಯ ಮುಖಂಡರೊಬ್ಬರು ಪ್ರಗತಿವಾಹಿನಿ ಬಳಿ ದೂರಿದರು.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲೆಯ ಸಚಿವರು, ಶಾಸಕರ ಗಮನಕ್ಕೂ ತರಲಾಗಿದೆ. ಯಾರೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಯಾಕೆ ಈ ರೀತಿ ವರ್ತನೆ ತೋರಿಸುತ್ತಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಅವರು.
ಜಿಲ್ಲಾಡಳಿತ ಈ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸದೇ ಹೋದಲ್ಲಿ ಮುಂದೆ ಸಂಕಷ್ಟ ಎದುರಿಸಬೇಕಾಗುತ್ತದೆ. ದೊಡ್ಡ ಸಮಸ್ಯೆ ಎದುರಾಗುವ ಮುನ್ನ ಇವುಗಳ ಕಡೆಗೆ ಗಮನ ಕೊಡಲಿ ಎನ್ನುವುದು ಸಾರ್ವಜವಿಕರ ಹಾಗೂ ಪ್ರಗತಿವಾಹಿನಿಯ ಕಳಕಳಿಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ