ಪ್ರಗತಿವಾಹಿನಿ ಸುದ್ದಿ; ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ದಿನಗಳ ಬಳಿಕ ಮತ್ತೆ ಓರ್ವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಉಪ್ಪಿನಂಗಡಿ ಮೂಲದ 39 ವರ್ಷದ ವ್ಯಕ್ತಿಯಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ 13ನೇ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಕಳೆದ 12 ದಿನಗಳಿಂದ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರಲಿಲ್ಲ. ಜಿಲ್ಲೆಯ 12 ಪ್ರಕರಣಗಳಲ್ಲಿ 9 ಮಂದಿ ಗುಣಮುಖರಾಗಿದ್ದರು. ಆದರೆ ಇಂದು ಮತ್ತೆ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸೋಂಕು ದೃಢಪಟ್ಟ ವ್ಯಕ್ತಿ ಪುತ್ತೂರು ತಾಲೂಕಿನ ಉಪ್ಪಿನಂಗಡಿಯವರಾಗಿದ್ದು ಸುಪ್ರೀಂ ಕೋರ್ಟ್ ವಕೀಲರಾಗಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ್ದರು. ಮಾರ್ಚ್ 21ರಂದು ನಿಜಾಮುದ್ದೀನ್ ರೈಲಿನಲ್ಲಿ ಮಂಗಳೂರಿಗೆ ಆಗಮಿಸಿದ್ದು, ಮನೆಯಲ್ಲೇ ಇದ್ದರು. ದಕ್ಷಿಣ ಕನ್ನಡ ಜಿಲ್ಲಾಡಳಿತ ಫೋನ್ ಲೊಕೇಶನ್ ಆಧಾರದಲ್ಲಿ ಪತ್ತೆ ಮಾಡಿ, ವಕೀಲರನ್ನು ಮಾರ್ಚ್ 23 ರಿಂದಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿತ್ತು. ನಂತರ ಸೋಂಕಿನ ಲಕ್ಷಣ ಕಂಡು ಬಂದಿರುವುದರಿಂದ ಗಂಟಲ ದ್ರಾವಣ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಂತೆ ಇಂದು ಬಂದ ವರದಿಯಲ್ಲಿ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ