Kannada NewsKarnataka NewsLatest

20 ಲಕ್ಷ ಕೋಟಿ ರೂ. ಪ್ಯಾಕೇಜ್: ಕೋರೆ, ಬಾಲಚಂದ್ರ ಜಾರಕಿಹೊಳಿ ಸ್ವಾಗತ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ರೂ ಪ್ಯಾಕೇಜ್ ನ್ನು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ವಾಗತಿಸಿದ್ದಾರೆ.

ಕಲ್ಪನಾತೀತವಾದ ಕೊರೋನಾ ಮಹಾಮಾರಿಯಿಂದ ದೇಶವು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಆರ್ಥಿಕವಾಗಿ ಎಂದೂ ಕೇಳರಿಯದ ಕಷ್ಟದ ದಿನಗಳನ್ನು ಎದುರಿಸುವಂತಹ ದಿನಗಳು ಎದುರಾಗುವಂತಾಗಿದೆ. ದುಡಿಯುವ ಕೈಗಳಿಗೆ ಆಹಾರದ ಮೊದಲ್ಗೊಂಡು ನೂರಾರು ಸಮಸ್ಯೆಗಳು ಎದುರಾಗಿವೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಟು ರೈತರ, ಕಾರ್ಮಿಕರ, ಮಧ್ಯಮವರ್ಗದವರ ಹಿತದೃಷ್ಟಿಯಿಂದ ಪ್ರಧಾನಿಯವರು ಕೈಗೊಳ್ಳುತ್ತಿರುವ ೨೦ ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್‌ನ್ನು ಘೋಷಿಸಿರುವುದು ಸಂದರ್ಭೋಚಿತವಾಗಿದೆ. ಪ್ರಧಾನಿಯವರ ಈ ನಡೆ ಪ್ರಸ್ತುತ ದೇಶದ ಜನತೆ ಆಧಾರವಾಗಿದೆ. ಸ್ವಾವಲಂಬಿ ಸಂಕಲ್ಪ ಹಾಗೂ ಸ್ವದೇಶಿ ವಸ್ತುಗಳನ್ನು ಬಳಕೆ ಮಾಡಿಕೊಳ್ಳಲು ಅವರು ನೀಡಿರುವ ಕರೆಯೂ ಕೂಡ ಮುಂದಿನ ದಿನಮಾನಗಳಲ್ಲಿ ನೂತನವಾದ ಭಾಷ್ಯ ಬರೆಯಲಿದೆ ಎಂದು ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.

  ಎಲ್ಲ ಕ್ಷೇತ್ರಗಳಿಗೂ ಅನುಕೂಲ :  ಬಾಲಚಂದ್ರ  

ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ಜಗತ್ತಿನಲ್ಲಿಯೇ ಮೂರನೇ ದೊಡ್ಡದಾದ ೨೦ ಲಕ್ಷ ಕೋಟಿ ರೂ. ಪ್ಯಾಕೇಜ್‌ನಿಂದ ರೈತರು, ಶ್ರಮಿಕರು, ಬಡವರು ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ಅನುಕೂಲವಾಗಲಿದ್ದು, ಇದರಿಂದ ಮುಂದೆ ಕಷ್ಟಕ್ಕೆ ನೆರವಾಗುವಂತಹ ಪ್ಯಾಕೇಜ್ ಇದಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಆತ್ಮ ನಿರ್ಭರ ಭಾರತ ಅಭಿಯಾನ ಸಮಸ್ತ ಭಾರತೀಯರ ಆತ್ಮ ವಿಶ್ವಾಸ ಹೆಚ್ಚಿಸಿದೆ. ಕೊರೋನಾ ವೈರಸ್ ಸಂಕಷ್ಟದಿಂದ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತಲು ಪ್ರಧಾನಿಗಳು ೨೦ ಲಕ್ಷ ಕೋಟಿ ರೂ. ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವ ಮೂಲಕ ಭಾರತವನ್ನು ಸದೃಢ ರಾಷ್ಟ್ರವನ್ನಾಗಿಸಲು ಹಾಗೂ ಸ್ವಾವಲಂಬತೆಯನ್ನು ಎತ್ತಿ ಹಿಡಿಯಲು ಇದು ಸಹಾಯಕವಾಗಿದೆ ಎಂದು ಹೇಳಿದರು.
ಕೊರೋನಾ ವೈರಸ್ ಇಡೀ ವಿಶ್ವವನ್ನೇ ವ್ಯಾಪಿಸಿದ್ದು ನಾಶಮಾಡಲು ಹೊರಟಿದೆ. ಇಂತಹ ಸಾಂಕ್ರಾಮಿಕ ರೋಗವನ್ನು ಹೊಡೆದೋಡಿಸಲು ಒಗ್ಗಟ್ಟಿನ ಹೋರಾಟ ಅವಶ್ಯವಾಗಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ ಧರಿಸುವುದರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕೊರೋನಾ ವಿರುದ್ಧ ಹೋರಾಟಕ್ಕೆ ಅಣಿಯಾಗಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನಗಳನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ಕೊರೋನಾ ಸಮರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎಲ್ಲರಿಗಿದೆ ಎಂದು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button