ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಬಗ್ಗೆ ಆಸಕ್ತಿ ಮೂಡಿಸಿ: ಡಿಡಿಪಿಐ ಪುಂಡಲಿಕ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಂಗ್ಲೀಷ್ ವಿಷಯವು ಕಲಿಯಲು, ಕಲಿತು ಆನಂದಿಸಲು ಸುಲಭ ವಿಷಯವಾಗಿದೆ. ಈ ವಿಷಯದ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಕರ್ತವ್ಯ ಪ್ರತಿಯೊಬ್ಬ ಇಂಗ್ಲೀಷ್ ಭಾಷೆಯ ಶಿಕ್ಷಕರದ್ದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನೀರ್ದೆಶಕ ಎ. ಬಿ. ಪುಂಡಲಿಕ ಹೇಳಿದರು.
ಬೆಳಗಾವಿಯ ಉಷಾತಾಯಿ ಗೋಗಟೆ ಬಾಲಕಿಯ ಪ್ರೌಢಶಾಲೆಯಲ್ಲಿ ಆಯೋಜಿಸಿದ ಇಂಗ್ಲೀಷ್ ವಿಷಯ ಕಾರ್ಯಾಗಾರದ ಉದ್ಘಾಟ ನೆರವೇರಿಸಿ ಅವರು ಮಾತನಾಡಿದರು.
ಮರಾಠಿ, ಕನ್ನಡ ಹಾಗೂ ಉರ್ದು ಮಾಧ್ಯಮಗಳ ವಿದ್ಯಾರ್ಥಿಗಳಿಗೂ ಕೂಡ ತಮ್ಮ ಅಭಿಪ್ರಾಯವನ್ನು ಇಂಗ್ಲೀಷ್ ಭಾಷೆಯಲ್ಲಿ ವ್ಯಕ್ತ ಪಡಿಸುವಂತೆ ಪ್ರೇರೇಪಿಸಬೇಕು. ಇಂಗ್ಲೀಷ್ ಭಾಷೆಯ ಮಹತ್ವ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ, ಅವರಲ್ಲಿದ್ದ ಭಯವನ್ನು ಮುಕ್ತಗೊಳಿಸುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ, ಇಂಗ್ಲೀಷ್ ವಿಷಯದ ಶಿಕ್ಷಕರು ತಮ್ಮ ಭಾಷೆಯಲ್ಲಿ ಪ್ರಾವಿಣ್ಯತೆಯೊಂದಿಗೆ ವಿದ್ಯಾರ್ಥಿಗಳಿಗೆ ಓದುವುದು, ಬರೆಯುವುದು, ಆಲಿಸುವುದು ಹಾಗೂ ಮಾತನಾಡುವ ಕೌಶಲ್ಯಗಳನ್ನು ರೂಢಿಯೊಂದಿಗೆ ಪರಿಪೂರ್ಣಗೊಳಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಬೆಳಗಾವಿ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಡಿ. ಬಡಿಗೇರ, ಇಂಗ್ಲೀಷ್ ವಿಷಯದ ಕುರಿತು ಶಬ್ದ ಸಂಗ್ರಹ, ವಾಕ್ಯರಚನೆ ಹಾಗೂ ವ್ಯಾಕರಣದ ಮಹತ್ವದೊಂದಿಗೆ ಭೋಧಿಸುವುದು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು.
ಇಂಗ್ಲೀಷ ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷ ಪಿ. ಎನ್. ಶ್ರೀನಾಥ ಮತ್ತು ರಾಜ್ಯ ಸಂಪನ್ಮೂಲ ವ್ಯಕ್ತಿ ಎಮ್. ಆಯ್. ಪೂಜಾರ ಶಿಕ್ಷಕರೊಡನೆ ಸಮಾಲೋಚಿಸಿ, ಇಂಗ್ಲೀಷ್ ವಿಷಯದ ಬಗ್ಗೆ ಇರುವ ಅನುಮಾನಗಳನ್ನು ನಿವಾರಿಸಿದರು.
ಝಡ್. ಜಿ. ಸಯ್ಯದ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಎಮ್. ಕೆ. ಮಾದಾರ ನಿರೂಪಿಸಿದರು. ಬೆಳಗಾವಿ ಗ್ರಾಮೀಣ ಹಾಗೂ ನಗರ ವಲಯದ ಎಲ್ಲ ಇಂಗ್ಲೀಷ್ ಶಿಕ್ಷಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ