Latest

ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲು ಸಚಿವ ಸಂಪುಟ ಒಪ್ಪಿಗೆ

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬಹು ನಿರೀಕ್ಷಿತ, ತುಂಗಭದ್ರಾ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯದ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ರಾಜ್ಯ ಸರ್ಕಾರ ಹೊಸ ಯೋಜನೆ ರೂಪಿಸಿದೆ.
ತುಂಗಭದ್ರಾ ಜಲಾಶಯದಲ್ಲಿ ಬಹಳಷ್ಟು ಹೂಳು ತುಂಬಿರುವ ಕಾರಣ ಉಂಟಾಗಿದ್ದ ನೀರು ಸಂಗ್ರಹಣೆಯ ಸಾಮರ್ಥ್ಯ ಸಮಸ್ಯೆಯನ್ನು ನೀಗಿಸಲು ಪರ್ಯಾಯ ಜಲಾಶಯ ನಿರ್ಮಾಣ ಕುರಿತು ವಿಸ್ತೃತ ಯೋಜನಾ ವರದಿ ತಯಾರಿಸಲು ಸಚಿವ ಸಂಪುಟ ಸಭೆ ಅನುಮತಿ ನೀಡಿದೆ.
ಪ್ರಸ್ತುತ ತುಂಗಭದ್ರಾ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ 130 TMC ಇದ್ದರೂ 31.616 TMC ಯಷ್ಟು ನೀರು ಹೂಳು ತುಂಬಿರುವ ಕಾರಣದಿಂದ ಕನಿಷ್ಠ 30 TMC ನೀರು ವ್ಯರ್ಥವಾಗುತ್ತಿತ್ತು.
ಈ ನೀರನ್ನು ಹಿಡಿದಿಟ್ಟು ಸಮರ್ಪಕವಾಗಿ ಬಳಕೆ ಮಾಡಲು ಮುಂದಾಗಿರುವ ಜಲಸಂಪನ್ಮೂಲ ಇಲಾಖೆ, ಹೊಸದಾಗಿ ಸಮತೋಲನ ಜಲಾಶಯ ನಿರ್ಮಾಣ ಮಾಡುವ ನೂತನ ಯೋಜನೆ ರೂಪಿಸಿದೆ.
ಅದರಂತೆ ನವಲಿ ಗ್ರಾಮದ ಹತ್ತಿರ ಹೊಸದಾಗಿ ಸಮತೋಲನ ಜಲಾಶಯ ನಿರ್ಮಾಣ ಕ್ಕೆ ಸಂಬಂಧಿಸಿ ವಿಸ್ತೃತ ಯೋಜನಾ ವರದಿ ತಯಾರಿಸಲು ಕರ್ನಾಟಕ ನೀರಾವರಿ ನಿಗಮ ನಿಯಮಿತಕ್ಕೆ ಕರ್ನಾಟಕ ರಾಜ್ಯದ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಈ ಸಮತೋಲನ ಜಲಾಶಯ ನಿರ್ಮಾಣಕ್ಕಾಗಿ ವಿಸ್ತೃತ ಯೋಜನಾ ವರದಿ ತಯಾರಿಸಲು 14.30 ಕೋಟಿ ರೂಪಾಯಿ ಮೊತ್ತದ ಅನುದಾನ ಬಿಡುಗಡೆ ಮಾಡಲು ಇಂದು ಜಲಸಂಪನ್ಮೂಲ ಇಲಾಖೆ ಆದೇಶಿಸಿದೆ.
ಬರದ ಸಮಸ್ಯೆ ನೀಗಿಸಲು ಮತ್ತು ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲು ಪರ್ಯಾಯ ಸಮತೋಲನ ಜಲಾಶಯದ ಅಗತ್ಯತೆಯನ್ನು ಮನಗಂಡು ಡಿಪಿಆರ್ ಸಮೀಕ್ಷೆ ಮಾಡಲು ಅಂದಾಜು ಮೊತ್ತದ ಬಿಡುಗಡೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
 ಹೂಳು ತುಂಬಿದ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣಾ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ದಿಸೆಯಲ್ಲಿ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ಅನುಮತಿ ನೀಡಿದ್ದಾರೆ. ಸಮರ್ಪಕವಾಗಿ ಬೆಳೆ ಬೆಳೆಯಲು ರೈತರಿಗೆ ಅಗತ್ಯವಾದ ನೀರಾವರಿ ಯೋಜನೆಗಳ ಜಾರಿಗೆ
ರೈತರಿಗೆ ಸಮರ್ಪಕ ಸಹಕಾರ ಸಿಗಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button