ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಇಡೀ ದೇಶದಲ್ಲಿ ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸೋತು ಸುಣ್ಣವಾಗಿದೆ. ಪಕ್ಷದ ನಾಯಕತ್ವ ದುರ್ಬಲವಾಗಿದ್ದೇ ಕಾಂಗ್ರೆಸ್ ನ ಇಂದಿನ ಪರಿಸ್ಥಿತಿಗೆ ಕಾರಣ ಎನ್ನುವ ಮಾತು ಪಕ್ಷದ ವಲಯದಲ್ಲೇ ಕೇಳಿಬರುತ್ತಿದೆ.
ಕೆಲವರು ಕೇವಲ ಅಧಿಕಾರ ಲಾಲಸೆಗೆ ಒಳಗಾದರೇ ವಿನಃ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಪಕ್ಷ ಕಟ್ಟುವ ಕೆಲಸಕ್ಕೆ ಇಳಿಯಲಿಲ್ಲ. ಹಾಗಾಗಿ ಕಾರ್ಯಕರ್ತರಪಡೆ ನಿರಾಸೆಯಿಂದ ಮಲಗಿದೆ. ಇಂತಹ ಪಡೆಯನ್ನು ಬಡಿದೆಬ್ಬಿಸಿ ಮತ್ತೊಮ್ಮೆ ಕಾಂಗ್ರೆಸ್ ಕಟ್ಟಿ ನಿಲ್ಲಿಸುವ ಉತ್ಸಾಹದಲ್ಲಿದ್ದಾರೆ ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ.
ಡಿ.ಕೆ.ಶಿವಕುಮಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿ ತಿಂಗಳುಗಳೆ ಕಳೆದಿದೆ. ಆದರೆ ಕೊರೋನಾ ಹಿನ್ನೆಲೆಯಲ್ಲಿನ ಲಾಕ್ ಡೌನ್ ನಿಂದಾಗಿ ಅವರು ಈವರೆಗೂ ಅಧಿಕಾರ ಸ್ವೀಕರಿಸಲು ಸಾಧ್ಯವಾಗಲಿಲ್ಲ, ರಾಜ್ಯ ಸುತ್ತಲು ಆಗಲಿಲ್ಲ.
ಮಂಗಳವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಿ.ಕೆ.ಶಿವಕುಮಾರ ಹೊಸ ಹುಮ್ಮಸ್ಸು ತೋರಿಸಿದ್ದಾರೆ. ಪಕ್ಷವನ್ನು ಹೊಸ ರೀತಿಯಲ್ಲಿ ಮುನ್ನಡೆಸುವ ಮುನ್ಸೂಚನೆ ನೀಡಿದ್ದಾರೆ. ಕಾರ್ಯಕರ್ತರ ಪಡೆ ಕಟ್ಟುವ ಶಪಥ ಮಾಡಿದ್ದಾರೆ. ಪ್ರಸ್ತುತ ಬಿಜೆಪಿ ಸರಕಾರದ ನಿದ್ದೆಗಿಡಿಸುವ ಸೂಚನೆ ನೀಡಿದ್ದಾರೆ.
ರಾಜ್ಯ ಪ್ರವಾಸ
ಡಿ.ಕೆ.ಶಿವಕುಮಾರ ಮೇ 31ರಂದು ಅಧಿಕಾರ ಸ್ವೀಕರಿಸುವ ಯೋಚನೆ ಮಾಡಿದ್ದರು. ಆದರೆ ಪ್ರತಿ ಭಾನುವಾರ ಲಾಕ್ ಡೌನ್ ಘೋಷಿಸಿದ್ದರಿಂದ ಅದು ಸಾಧ್ಯವಾಗುತ್ತಿಲ್ಲ. ರಾಜ್ಯ ಸರಕಾರದ ಆದೇಶ ಉಲ್ಲಂಘಿಸಿ ನಾವು ಕಾರ್ಯಕ್ರಮ ಮಾಡುವುದಿಲ್ಲ. ಮತ್ತೊಮ್ಮೆ ದಿನಾಂಕ ಪ್ರಕಟಿಸುತ್ತೇನೆ ಎಂದಿದ್ದಾರೆ.
ಲಾಕ್ ಡೌನ್ ಮುಗಿದ ನಂತರ ಇಡೀ ರಾಜ್ಯ ಸುತ್ತಿ ಕೊರೋನಾದಿಂದ ನೊಂದಿರುವ ಜನರಿಗೆ ಸಾಂತ್ವನ ಹೇಳುತ್ತೇನೆ. ಇದರಲ್ಲಿ ರಾಜಕೀಯ ಮಾಡುವುದಿಲ್ಲ. ರಾಜ್ಯ ಸರಕಾರ ಇಂತಹ ಕಷ್ಟದ ಸಂದರ್ಭದಲ್ಲಿ ಜನರನ್ನು, ಕಾರ್ಮಿಕರನ್ನು, ಬಡವರನ್ನು ಸರಿಯಾಗಿ ನೋಡಿಕೊಂಡಿಲ್ಲ ಎಂದು ಡಿಕೆಶಿ ಹರಿಹಾಯ್ದಿದ್ದಾರೆ. ರಾಜ್ಯ ಸರಕಾರದ ವಿರೋಧ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ. ಮನಬಂದಂತೆ ಮಾಡಲು ಹೋಗಿ ಜನರನ್ನು ಸಂಕಷ್ಟದಲ್ಲಿ ನೂಕಿದೆ ಎಂದು ಕಿಡಿ ಕಾರಿದ್ದಾರೆ.
750 ಸ್ಥಳಗಳಲ್ಲಿ ಕಾರ್ಯಕ್ರಮ
ತಾವು ಅಧಿಕಾರ ಸ್ವೀಕರಿಸುವ ದಿನ ರಾಜ್ಯದ 750 ಸ್ಥಳಗಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕರ್ತರು ತಮ್ಮ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.
ಒಟ್ಟಾರೆ ತಮ್ಮ ಅಧಿಕಾರ ಸ್ವೀಕರ ಕಾರ್ಯಕ್ರಮ ರಾಜ್ಯದಲ್ಲಿ ದೊಡ್ಡ ಸದ್ದು ಮಾಡುವಂತೆ ಮಾಡಲು ಮುಂದಾಗಿರುವ ಶಿವಕುಮಾರ ಮಲಗಿರುವ ಕಾಂಗ್ರೆಸ್ ಪಕ್ಷವನ್ನು, ನಾಯಕರನ್ನು, ಕಾರ್ಯಕರ್ತರನ್ನು ಬಡಿದೆಬ್ಬಿಸಿ ಪಕ್ಷ ಕಟ್ಟಲು ನಿರಧರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ –
ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಸಧ್ಯಕ್ಕಿಲ್ಲ
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಪರಿಚಿತ ಗ್ರುಪ್ ಗಳಿಗೆ ಕಳಿಸಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ