ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಕಚೇರಿಯನ್ನು ಬೆಳಗಾವಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸ್ಥಳಾಂತರಿಸುವ ಉದ್ದೇಶವನ್ನು ಸರಕಾರ ಕೈ ಬಿಟ್ಟಿದೆ.
ಶಾಸಕ ಅಭಯ ಪಾಟೀಲ ಈ ಮಾಹಿತಿ ನೀಡಿದ್ದು, ಈ ಕುರಿತ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮತ್ತು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ರವಿ, ಕಚೇರಿ ಸ್ಥಳಾಂತರ ಕೈಬಿಡುವುದಾಗಿ ತಿಳಿಸಿದ್ದಾರೆ ಎಂದಿದ್ದಾರೆ.
ಬೆಳಗಾವಿ ಕರ್ನಾಟಕದ ಎರಡನೆಯ ರಾಜಧಾನಿ ಎಂದೇ ಕರೆಯಲ್ಪಡುವ ಜಿಲ್ಲೆಯಾಗಿದ್ದು, ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ನೂರಾರು ಕೋಟಿ ರೂ,ಗಳ ವೆಚ್ಚದಲ್ಲಿ ಸುವರ್ಣ ಸೌಧ ನಿರ್ಮಾಣ ಮಾಡಿದೆ.
ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಲಾಗುವುದು ಎನ್ನುತ್ತಲೇ ಈ ಭಾಗದ ಅನೇಕ ಉನ್ನತ ಸರಕಾರಿ ಕಚೇರಿಗಳನ್ನು ಸ್ಥಳಾಂತರಿಸುವ ಅಧಿಕಾರಿಗಳ ನಿಲುವಿಗೆ ಉತ್ತರ ಕರ್ನಾಟಕದ ಜನತೆಯ ಅಸಮಾಧಾನದ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರ ಹುದ್ದೆಯನ್ನು ಮಂಗಳೂರು ಜಿಲ್ಲೆಗೆ ಸ್ಥಳಾಂತರಿಸಿ, ಸಹಾಯಕ ನಿರ್ದೇಶಕರು ಹುದ್ದೆಯನ್ನು ಬೆಳಗಾವಿಗೆ ಸ್ಥಳಾಂತರಿಸಲು ಸರಕಾರ ನಿರ್ಧರಿಸಿತ್ತು.
ಈ ಕ್ರಮ ಬೆಳಗಾವಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಅಭಯ ಪಾಟೀಲ, ಬೆಳಗಾವಿ ಜಿಲ್ಲೆಯ ಉಸ್ತುವಾರಿ ಮಂತ್ರಿ ಜಗದೀಶ್ ಶೆಟ್ಟರ್ ರವರೆಗೆ ಮೇ 15 ರಂದು ಪತ್ರ ನೀಡಿದ್ದರ. ಜೊತೆಗೆ, ಇಂದು ಬೆಂಗಳೂರಿನಲ್ಲಿ ಪ್ರವಾಸೋದ್ಯಮದ ಸಚಿವ ಸಿ. ಟಿ ರವಿಯವರನ್ನು ಭೇಟಿಯಾಗಿ, ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ
ಉಪ ನಿರ್ದೇಶಕರ ಹುದ್ದೆ ಮೊದಲಿನಂತೆ ಮುಂದೆವರಿಸುವಂತೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿರುವ ಸಿ.ಟಿ.ರವಿ ಕಚೇರಿ ಸ್ಥಳಾಂತರ ಕೈಬಿಡುವುದಾಗಿ ತಿಳಿಸಿದ್ದಾರೆ ಎಂದು ಅಭಯ ಪಾಟೀಲ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ